ಜೈಪುರ: ರಾಜಸ್ತಾನದ ಮೊದಲ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉದ್ಘಾಟಿಸಿದ ಪ್ರಧಾನಿ ಮೋದಿಯವರು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ನನ್ನ ಒಳ್ಳೆಯ ಮಿತ್ರ ಮತ್ತು ಪ್ರಧಾನಿಯಾಗಿ ನನ್ನ ಕೆಲಸ ಮಾಡಲು ಬಿಟ್ಟವರು ಎಂದು ಬಣ್ಣಿಸಿದರು.
ವೀಡಿಯೋ ಕಾನ್ಫರೆನ್ಸ್ ಮೂಲಕ ವಂದೇ ಭಾರತ್ ಗೆ ಚಾಲನೆ ನೀಡಿದ ಮೋದಿಯವರು ಗೆಹ್ಲೋಟ್ ಜೊತೆಗೆ ಕಾಣಿಸಿಕೊಂಡರು. ರಾಜಸ್ತಾನದ ರೈಲು ಯೋಜನೆಯಾದ್ದರಿಂದ ಇದರಲ್ಲಿ ಅಚ್ಚರಿ ಏನಿಲ್ಲ.
ಆದರೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿರುವ ರಾಜ್ಯದ ಮುಖ್ಯಮಂತ್ರಿಯನ್ನು ಪ್ರಧಾನಿ ಹೊಗಳಿದ್ದು ಮಾತ್ರ ಕೆಲವರಿಗೆ ಅಚ್ಚರಿ ಎನಿಸಿದೆ.
“ಹಲವು ರಾಜಕೀಯ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ಗೆಹ್ಲೋಟ್ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಇಲ್ಲಿ ನನ್ನನ್ನು ವಂದೇ ಭಾರತ್ ಗೆ ಬೆನ್ನು ಬಿದ್ದು ಕೆಲಸ ಮಾಡಿಸಿದ್ದಾರೆ.” ಎಂದು ಪ್ರಧಾನಿ ಹೇಳಿದರು.
ಜೈಪುರ ರೈಲು ನಿಲ್ದಾಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೈಲು ಮಂತ್ರಿ ಅಶ್ವಿನ್ ವೈಷ್ಣವ್, ರಾಜಸ್ತಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಇದ್ದರು.
“ಗೆಹ್ಲೋಟ್ ರೇ ನಿಮ್ಮ ಕೈಯಲ್ಲಿ ಎರಡು ಲಾಡು ಇದೆ. ರೈಲು ಮಂತ್ರಿ ಮತ್ತು ರೈಲು ಮಂಡಳಿ ಚೇರ್ಮನ್ ನಿಮ್ಮ ರಾಜ್ಯದವರು. ಸ್ವಾತಂತ್ರ್ಯ ಸಿಕ್ಕಾಗಿನಿಂದ ಹೆಚ್ಚು ಕೆಲಸ ಆಗಿಲ್ಲ, ಈಗ ಆಗುತ್ತಿದೆ, ನೀವೂ ಸಾಧಿಸುತ್ತಿದ್ದೀರಿ” ಎಂದು ಮೋದಿ ಹೇಳಿದರು.
ಆದರೆ ಹಿಂದಿನ ರೈಲು ಮಂತ್ರಿಗಳು ಕೆಲಸ ಮಾಡಿಲ್ಲ ಎಂದು ಪ್ರಧಾನಿ ಹೇಳಿದ್ದನ್ನು ಗೆಹ್ಲೋಟ್ ಒಪ್ಪಲಿಲ್ಲ. ಸಭೆಯ ಬಳಿಕ ಪತ್ರಕರ್ತರೆದುರು ಅದನ್ನು ಟೀಕಿಸಿದರು.