ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದೆದರು ದಾಂಧಲೆ ಮಾಡಿ, ಸ್ವತ್ತುಗಳಿಗೆ ಹಾನಿ ಉಂಟು ಮಾಡಿದ್ದ ಆರೋಪದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಎಂಟು ಮಂದಿ ಆರೋಪಿಗಳಿಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದೆ.
ಯಾವುದೇ ಶಸ್ತ್ರಾಸ್ತ್ರ ಬಳಕೆ ಅಥವಾ ಹಿಂಸಾಚಾರಕ್ಕೆ ಕರೆ ನೀಡಿದ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖವಿಲ್ಲ. ಹಾಗೂ ಐವರು ಆರೋಪಿಗಳು ಇಪ್ಪತ್ತರ ಹರೆಯದವರಾಗಿದ್ದು, ಅವರ ಸೆರೆವಾಸವನ್ನು ಮುಂದುವರೆಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಆಶಾ ಮೆನನ್ ಅವರಿದ್ದ ಏಕಸದಸ್ಯ ಪೀಠ ಆದೇಶದ ವೇಳೆ ಹೇಳಿದೆ.
ಕಾಶ್ಮೀರಿ ಪಂಡಿತರ ಕುರಿತಂತೆ ಕೇಜ್ರಿವಾಲ್ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಅವರ ಮನೆಯೆದುರು ಪ್ರತಿಭಟನೆ ನಡೆಸಲಾಗಿತ್ತು. ಸನ್ನಿ, ರಾಜು ಕುಮಾರ್ ಸಿಂಗ್, ನೀರಜ್ ದೀಕ್ಷಿತ್, ಪ್ರದೀಪ್ ಕುಮಾರ್ ತಿವಾರಿ, ನವೀನ್ ಕುಮಾರ್, ಬಬ್ಲು ಕುಮಾರ್ ಸಿಂಗ್, ಚಂದರ್‌ಕಾಂತ್ ಭಾರದ್ವಾಜ್ ಮತ್ತು ಜಿತೇಂದರ್ ಸಿಂಗ್ ಬಿಷ್ಟ್ ಅವರನ್ನು ಘಟನೆಗೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 186, 188, 353, 332, 143, 147, 149 ಜೊತೆಗೆ ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.
(ಕೃಪೆ: ಬಾರ್ ಆ್ಯಂಡ್ ಬೆಂಚ್)