ಬೆಂಗಳೂರು: ಗುತ್ತಿಗೆದಾರರಿಂದ ಸರ್ಕಾರ ಕಮಿಷನ್ ಕೇಳುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಗುತ್ತಿಗೆದಾರರ ಸಂಘದ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಸಚಿವ ಮುನಿರತ್ನ , ಕಮಿಷನ್ ಕೇಳಿದ್ದಕ್ಕೆ ಪೂರಕ ದಾಖಲೆ ನೀಡಬೇಕು ಅಥವಾ ಏಳು ದಿನಗಳ ಒಳಗಾಗಿ ಎಲ್ಲಾ ಮಾಧ್ಯಮಗಳ ಮುಂದೆ ಬಂದು ಸಾಮೂಹಿಕವಾಗಿ ಕ್ಷಮೆ ಕೋರಬೇಕು ಎಂದು ಹೇಳಿದರು. ಇಲ್ಲದಿದ್ದರೆ ಇಂದು 11 ಗಂಟೆಗೆ ಸಂಘದ ಎಲ್ಲಾ ಸದಸ್ಯರಿಗೆ ವಕೀಲರ ಮೂಲಕ ನೋಟೀಸ್ ಕಳುಹಿಸುತ್ತೇನೆ ಮತ್ತು ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ತಿಳಿಸಿದರು.
ಪ್ರಧಾನಿಗೆ ಪತ್ರ ಬರೆದವರು ಪ್ರಧಾನಿಗೆ ದಾಖಲೆ ನೀಡಲಿ. ಲೋಕಾಯುಕ್ತ ಇಲಾಖೆಗೆ ದಾಖಲೆ ಒಪ್ಪಿಸಲಿ. ನಾನು ಕೂಡ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಮುನಿರತ್ನ ಹೇಳಿದರು.