Home ಜಾಲತಾಣದಿಂದ ತಿಗಳರ ಅಭಿವೃದ್ಧಿ ನಿಗಮ ರದ್ದುಪಡಿಸದಿದ್ದರೆ ಉಗ್ರ ಹೋರಾಟ: ವಹ್ನಿಕುಲ ಕ್ಷತ್ರೀಯ ಸಂಘ ಎಚ್ಚರಿಕೆ

ತಿಗಳರ ಅಭಿವೃದ್ಧಿ ನಿಗಮ ರದ್ದುಪಡಿಸದಿದ್ದರೆ ಉಗ್ರ ಹೋರಾಟ: ವಹ್ನಿಕುಲ ಕ್ಷತ್ರೀಯ ಸಂಘ ಎಚ್ಚರಿಕೆ

►’ತಿಗಳರಿಗೂ ವಹ್ನಿಕುಲ ಕ್ಷತ್ರೀಯರಿಗೂ ಸಂಬಂಧವಿಲ್ಲ’

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ರಾಜ್ಯ ತಿಗಳರ ಅಭಿವೃದ್ಧಿ ನಿಗಮ ರಚಿಸಿ ತಮಗೆ *ಸಂಬಂಧಪಡದ ವಹ್ನಿಕುಲ ಕ್ಷತ್ರೀಯ, ಧರ್ಮರಾಜ ಕಾಪು, ಪಳ್ಳಿ, ವನ್ನಿಯಾರ್ , ವನ್ನಿ ಗೌಡರ್ , ಪಳ್ಳಿ , ಪಡಾಯೆಚಿ , ಧರ್ಮರಾಜ ಕಾಪು , ಧರ್ಮರಾಯ ಒಕ್ಕಲಿಗ, ಅಗ್ನಿಕುಲ ಕ್ಷತ್ರೀಯ ಒಳಗೊಂಡಂತೆ ಎಲ್ಲಾ ಉಪ ಜಾತಿಗಳನ್ನು ಸೇರಿಸಿರುವುದು ಸರಿಯಲ್ಲ. ತಿಗಳ ಜಾತಿಗೂ, ಕರಗ ಹೊರುವ ವಹ್ನಿಕುಲ ಕ್ಷತ್ರೀಯರಿಗೂ ಯಾವುದೇ ಸಂಬಂಧವಿಲ್ಲ. ಸರ್ಕಾರದ ನಡೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಕರ್ನಾಟಕ ರಾಜ್ಯ ವಹ್ನಿಕುಲ ಕ್ಷತ್ರೀಯ ಸಂಘದ ರಾಜ್ಯಾಧ್ಯಕ್ಷ ವರ್ತೂರ್ ಜೆ.ಕೆ. ಗಿರೀಶ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಹ್ನಿಕುಲ ಕ್ಷತ್ರೀಯರಿಗೂ ತಿಗಳ ಜಾತಿಗೂ ಯಾವುದೇ ಸಂಬಂಧವಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದ ವಿವಾದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಲ್ಲಿ ವಿಚಾರಣೆ ನಡೆಯುತ್ತಿದ್ದು, 2021 ರಲ್ಲಿ ಬಹಿರಂಗ ವಿಚಾರಣೆಗಳು ಕೂಡ ನಡೆದಿವೆ. ಇದೀಗ ಅಂತಿಮ ತೀರ್ಪು ಬರುವ ತನಕ ನಿಗಮ ರಚನೆಯನ್ನು ರದ್ದುಪಡಿಸಬೇಕು, ಇಲ್ಲವೆ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.

ಹಾಗೊಂದು ವೇಳೆ ನಿಗಮ ಮಂಡಳಿ ರಚನೆಯನ್ನು ಮುಂದುವರೆಸಿದ್ದೇ ಆದಲ್ಲಿ ಅಥವಾ ಸರ್ಕಾರ ತನ್ನ ತೀರ್ಮಾನದಿಂದ ಹಿಂದೆ ಸರಿಯದಿದ್ದರೆ ನಿಗಮದಿಂದ ದೂರ ಉಳಿಯುವುದಾಗಿ ಬಹಿಷ್ಕಾರ ಹಾಕುತ್ತೇವೆ. ಬಿಜೆಪಿ ಸರ್ಕಾರ ಹಿಂದುತ್ವದ ಸಂಪ್ರದಾಯಗಳು, ಆಚಾರ, ವಿಚಾರಗಳ ಮೇಲೆ ಅಸ್ತಿತ್ವಕ್ಕೆ ಬಂದಿದ್ದು, ನಮ್ಮ ಕರಗ ಸತ್ ಸಂಪ್ರದಾಯಗಳು ನಶಿಸಿಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ನಾವು ನಮ್ಮ ರೀತಿ, ರಿವಾಜುಗಳನ್ನು ಉಳಿಸಿಕೊಳ್ಳಲು ತಿಗಳ ಜಾತಿಯಿಂದ ದೂರ ಇರಬೇಕಾಗಿದೆ. ಹೀಗಾಗಿ ನಿಗಮವನ್ನು ರದ್ದುಪಡಿಸದಿದ್ದರೆ ವಿವಿಧ ವಹ್ನಿಕುಲ ಕ್ಷತ್ರೀಯ ಸಂಘಟನೆಗಳಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ರಾಜ್ಯಾಧ್ಯಕ್ಷ ವರ್ತೂರ್ ಜೆ.ಕೆ. ಗಿರೀಶ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ವೇಣು, ವಹ್ನಿಕುಲ ಕ್ಷತ್ರೀಯ ಯೂತ್ ಬ್ರಿಗೇಡ್ ಅಧ್ಯಕ್ಷ ಲಕ್ಷ್ಮೀಶ್, ಸಂಘದ ಪ್ರಮುಖರಾದ ತ್ಯಾಗರಾಜ್ ಪಿಳ್ಳಪ್ಪ ಅವರು ಉಪಸ್ಥಿತರಿದ್ದರು.

Join Whatsapp
Exit mobile version