ಲಕ್ನೋ: ಉತ್ತರಪ್ರದೇಶದ ಉನ್ನಾವೊದಲ್ಲಿ ಗಲಭೆ ನಿಯಂತ್ರಿಸಲು ಪೊಲೀಸರು ಪ್ಲಾಸ್ಟಿಕ್ ಕುರ್ಚಿ ಮತ್ತು ಬೆತ್ತದ ಬುಟ್ಟಿಯನ್ನು ರಕ್ಷಣೆಗಾಗಿ ಬಳಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಠಾಣಾಧಿಕಾರಿ ಹಾಗೂ ಇತರ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಗಲಭೆಯ ವೇಳೆ ಚಿತ್ರೀಕರಿಸಲಾಗಿದ್ದ ಫೋಟೋವನ್ನು ಗಮನಿಸಿದ ಲಕ್ನೋ ವಲಯದ ಇನ್ಸ್ ಪೆಕ್ಟರ್ ಜನರಲ್ ಲಕ್ಷ್ಮಿ ಸಿಂಗ್ ಅವರು, ಎಸ್ ಎಚ್ ಒ(ಠಾಣಾಧಿಕಾರಿ) ದಿನೇಶ್ ಚಂದ್ರ ಮಿಶ್ರಾ ಹಾಗೂ ಇತರ ಮೂವರು ಪೊಲೀಸ್ ಕಾನ್ಸ್ಟೇಬಲ್ ಗಳನ್ನು ಅಮಾನತುಗೊಳಿಸುವಂತೆ ಆದೇಶ ನೀಡಿರುವುದಾಗಿ ವರದಿಯಾಗಿದೆ.
ಉತ್ತರಪ್ರದೇಶ ಪೊಲೀಸ್ ಈ ಕುರಿತು ಟ್ವೀಟ್ ಮಾಡಿದ್ದು, ಯಾವುದೇ ರೀತಿಯ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಜಿಲ್ಲೆಗಳಿಗೂ ಅಗತ್ಯವಿರುವ ಪರಿಕರ(ಲಾಠಿ, ರಕ್ಷಣಾ ಕವಚ, ಹೆಲ್ಮೆಟ್) ನೀಡಲಾಗಿದ್ದು, ಈ ಬಗ್ಗೆ ಎಸ್ಒಪಿಯನ್ನು ಕೂಡಾ ಕಳುಹಿಸಲಾಗಿತ್ತು ಎಂದು ವಿವರಿಸಿದೆ.
ಉನ್ನಾವೋದಲ್ಲಿನ ಕಾನೂನು, ಸುವ್ಯವಸ್ಥೆಯ ಬಗ್ಗೆ ಗುಪ್ತಚರ ಇಲಾಖೆಯ ಮಾಹಿತಿಯ ಹೊರತಾಗಿಯೂ ಪೊಲೀಸ್ ಪಡೆ ಪ್ಲಾಸ್ಟಿಕ್ ಕುರ್ಚಿ ಹಾಗೂ ಬೆತ್ತದ ಬುಟ್ಟಿಯನ್ನು ರಕ್ಷಣೆಗಾಗಿ ಬಳಸಿಕೊಂಡಿರುವುದು ಅಪರಾಧ, ಈ ಬಗ್ಗೆ ಡಿಜಿಪಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸ್ಥಳೀಯ ಮಟ್ಟದ ಪೊಲೀಸ್ ಅಧಿಕಾರಿಗಳಿಂದ ವಿವರಣೆ ಕೇಳಿದ್ದೇನೆ ಎಂದು ಐಜಿ ತಿಳಿಸಿದ್ದಾರೆ.