Home ರಾಜ್ಯ ಉತ್ತರಾಖಂಡ: ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸ್ಥಗಿತ!

ಉತ್ತರಾಖಂಡ: ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸ್ಥಗಿತ!

ಡೆಹ್ರಾಡೂನ್:‌ ಸುರಂಗದೊಳಗೆ ಸಿಲುಕಿದ್ದ 40 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಇನ್ನೂ ಯಶಸ್ಸಾಗಲಿಲ್ಲ. ಈ ಆತಂಕದ ಜೊತೆಗೆ ಮಣ್ಣು ಕುಸಿದ ಕಾರಣ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಒಳಗಿರುವವ ಸ್ಥಿತಿ ಚಿಂತಾಜನಕವಾಗಿದೆ.

ಕಳೆದ ಆರು ದಿನಗಳಿಂದ ಸುರಂಗದೊಳಗೆ 40 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿತ್ತು. ಆದರೆ ಇಂದು ಮಧ್ಯಾಹ್ನ ಮತ್ತೆ ಮಣ್ಣು ಕುಸಿದ ಪರಿಣಾಮ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ವರದಿಯಾಗಿದೆ.

ರಕ್ಷಣಾ ಕಾರ್ಯಾಚರಣೆಗಾಗಿ 5ನೇ ಟ್ಯೂಬ್‌ ಅನ್ನು ಸುರಂಗದೊಳಗೆ ಇಳಿಸಿದಾಗ ಮಣ್ಣು ಕುಸಿಯಲು ಆರಂಭಿಸಿತ್ತು. ಇದರಿಂದಾಗಿ ಡ್ರಿಲ್ಲಿಂಗ್‌ ಮೆಷಿನ್‌ ಕಾರ್ಯಕ್ಕೆ ತೊಡಕಾಗಿದೆ. ಆದ್ದರಿಂದ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ವರದಿ ವಿವರಿಸಿದೆ.

ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ 40 ಕಾರ್ಮಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ರಕ್ಷಣಾ ತಂಡ ಹಗಲು ರಾತ್ರಿ ಕಾರ್ಯಾಚರಣೆ ನಡೆಸಿತ್ತು. ಆದರೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದಿದ್ದರಿಂದ ಕಾರ್ಯಾಚರಣೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ಸುಮಾರು 30ರಿಂದ 40 ಮೀಟರ್‌ ನಷ್ಟು ಮಣ್ಣನ್ನು ಹೊರತೆಗೆಯಬೇಕಾಗಿದೆ. ಬಳಿಕ ಕಾರ್ಮಿಕರು ಸಿಲುಕಿರುವ ಸ್ಥಳವನ್ನು ತಲುಪಬಹುದಾಗಿದೆ. ಕಾರ್ಮಿಕರು ಈಗಾಗಲೇ ಸುರಂಗದಾಳದಲ್ಲಿ ಸಿಲುಕಿಕೊಂಡು 120 ಗಂಟೆಗಳು ಕಳೆದಿದೆ. ಏತನ್ಮಧ್ಯೆ ಆದಷ್ಟು ಶೀಘ್ರದಲ್ಲಿ ಕಾರ್ಮಿಕರನ್ನು ರಕ್ಷಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp
Exit mobile version