ಉತ್ತರಾಖಂಡ: ಇಂದು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಯ ನಂತರ ಏಕರೂಪ ನಾಗರಿಕ ಸಂಹಿತೆ ಮಸೂದೆ ಅಂಗೀಕಾರ ಪಡೆದಿದೆ. ಧ್ವನಿ ಮತದಿಂದ ಅಂಗೀಕರಿಸಲಾಗಿದೆ ಇನ್ನು ರಾಜ್ಯಪಾಲರಿಗೆ ಕಳುಹಿಸಲಾಗುತ್ತದೆ.
ರಾಜ್ಯಪಾಲರು ಅಂಕಿತ ಹಾಕಿದ ಕೂಡಲೇ ಇದು ಕಾನೂನಾಗಿ ರೂಪುಗೊಳ್ಳಲಿದೆ. ಇದರೊಂದಿಗೆ ರಾಜ್ಯದ ಎಲ್ಲ ಜನರಿಗೂ ಒಂದೇ ಕಾನೂನು ಅನ್ವಯವಾಗಲಿದೆ. ಆದಾಗ್ಯೂ, ಅದರ ನಿಬಂಧನೆಗಳು ಪರಿಶಿಷ್ಟ ಪಂಗಡದ (ST) ಜನರಿಗೆ ಅನ್ವಯಿಸುವುದಿಲ್ಲ.
ಪ್ರಸ್ತಾವನೆ ಅಂಗೀಕಾರಕ್ಕೂ ಮುನ್ನ ಮಸೂದೆ ಕುರಿತು ಮಾತನಾಡಿದ ಸಿಎಂ ಪುಷ್ಕರ್ ಸಿಂಗ್ ಧಾಮಿ, ನಮ್ಮ ಸಂವಿಧಾನ ರಚನೆಕಾರರು ಕಂಡ ಕನಸು ಇಂದು ನನಸಾಗಲಿದೆ. ನಾವು ಇತಿಹಾಸ ಸೃಷ್ಟಿಸಲಿದ್ದೇವೆ. ದೇಶದ ಇತರೆ ರಾಜ್ಯಗಳೂ ಇದೇ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದ್ದಾರೆ.
2022ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಏಕರೂಪ ನಾಗರಿಕ ಸಂಹಿತೆಯ ಭರವಸೆಯನ್ನು ಬಿಜೆಪಿ ನೀಡಿತ್ತು.
ಉತ್ತರಾಖಂಡ ಸರ್ಕಾರವು ಸಿದ್ಧಪಡಿಸಿದ ಏಕರೂಪ ನಾಗರಿಕ ಸಂಹಿತೆ ಮಸೂದೆಯು ಮಗ ಮತ್ತು ಮಗಳಿಗೆ ಅವರ ವರ್ಗವನ್ನು ಲೆಕ್ಕಿಸದೆ ಆಸ್ತಿಯಲ್ಲಿ ಸಮಾನ ಹಕ್ಕುಗಳನ್ನು ಖಾತ್ರಿಪಡಿಸಿದೆ. ಎಲ್ಲಾ ವರ್ಗದ ಪುತ್ರರು ಮತ್ತು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ನೀಡಲಾಗಿದೆ. ರಾಜ್ಯದ ಎಲ್ಲಾ ನಾಗರಿಕರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಭೂಮಿ, ಆಸ್ತಿ ಮತ್ತು ಪಿತ್ರಾರ್ಜಿತ ಕಾನೂನುಗಳಲ್ಲಿ ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ ಎಂದು ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.