ಡೆಹ್ರಾಡೂನ್: ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದ ವಿರಾಟ್ ಕೊಹ್ಲಿ ವಿಡಿಯೋ ಕುರಿತು ಉತ್ತರಾಖಂಡ ಸರ್ಕಾರ ಮತ್ತು ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಉತ್ತರಾಖಂಡ ಹೈಕೋರ್ಟ್ ನೋಟಿಸ್ ಜಾರಿ ಮಾಡಿದ್ದು, ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ಕೇಳಿದೆ.
ವಿರಾಟ್ ಕೊಹ್ಲಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಈ ವಿಡಿಯೋ ಬಿಡುಗಡೆಯಾಗಿದ್ದು, ಈ ವಿಡಿಯೋದಲ್ಲಿ ಕೊಹ್ಲಿ, ಮಕ್ಕಳು ಆಟ ಆಡುವ ಮೈದಾನಗಳ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಆದರೆ, ವೀಡಿಯೋ ಬಿಡುಗಡೆಯಾದ ಬಳಿಕ ಇದೀಗ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಉತ್ತರಾಖಂಡ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದೆ. ಅಲ್ಲದೆ ಉತ್ತರಾಖಂಡ ಸರ್ಕಾರ ಮತ್ತು ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು, ಈ ವಿಡಿಯೋ ಬಗ್ಗೆ ಪ್ರತಿಕ್ರಿಯೆ ಕೇಳಿದೆ.
ವಿರಾಟ್ ಕೊಹ್ಲಿ ವಿಡಿಯೋದಲ್ಲಿ ಏನಿದೆ?
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ, ದೇಶದಲ್ಲಿ ಮಕ್ಕಳಿಗೆ ಕ್ರೀಡಾ ಮೈದಾನಗಳ ಕೊರತೆಯ ಬಗ್ಗೆ ಮಾತನಾಡುವುದನ್ನು ಕಾಣಬಹುದಾಗಿದೆ. ಮಕ್ಕಳಿಗೆ ಆಟವಾಡಲು ಸ್ಥಳಾವಕಾಶದ ಕೊರತೆ ಉಂಟಾಗಿದ್ದು, ಇದರಿಂದ ರಸ್ತೆಯಲ್ಲಿ ಆಟವಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ರೀತಿಯ ಸಂದರ್ಭಗಳಲ್ಲಿ ಮಕ್ಕಳು ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂಬುದನ್ನು ಕೊಹ್ಲಿ, ವಿಡಿಯೋದಲ್ಲಿ ಸ್ಪಷ್ಟವಾಗಿ ತೋರಿಸಿದ್ದಾರೆ. ಇದೀಗ ಕೊಹ್ಲಿ ಅವರ ಈ ವಿಡಿಯೋ ಕುರಿತು ಉತ್ತರಾಖಂಡ ಹೈಕೋರ್ಟ್ ಎರಡು ವಾರಗಳಲ್ಲಿ ಉತ್ತರ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಈ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ವಿಪಿನ್ ಸಂಘಿ ಮತ್ತು ನ್ಯಾಯಮೂರ್ತಿ ರಾಕೇಶ್ ಥಪ್ಲಿಯಾಲ್ ಅವರ ಪೀಠವು ಉತ್ತರಾಖಂಡದ ಕ್ರೀಡಾ ಕಾರ್ಯದರ್ಶಿ, ಭಾರತ ಸರ್ಕಾರದ ನಗರಾಭಿವೃದ್ಧಿ ಕಾರ್ಯದರ್ಶಿ, ಯುವ ವ್ಯವಹಾರ ಮತ್ತು ಕ್ರೀಡಾ ಕಾರ್ಯದರ್ಶಿ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ. ಮಕ್ಕಳಿಗಾಗಿ ಆಟದ ಮೈದಾನಗಳನ್ನು ಸಿದ್ಧಪಡಿಸಲು ಯಾವ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ನ್ಯಾಯಾಲಯವು ಸರ್ಕಾರಗಳನ್ನು ಕೇಳಿದೆ. ಇದೀಗ ಅಕ್ಟೋಬರ್ 9 ರಂದು ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಲಿದೆ.
ಇತ್ತೀಚೆಗೆ ವೈರಲಾಗಿರುವ ಕೊಹ್ಲಿ ವಿಡಿಯೋ
ಕೊಹ್ಲಿ ವಿಡಿಯೋ ಬಗ್ಗೆ ಕೋರ್ಟ್ ಹೇಳಿದ್ದೇನು?
ವಿರಾಟ್ ಕೊಹ್ಲಿ ಅವರ ವಿಡಿಯೋ ಕುರಿತು ಹೈಕೋರ್ಟ್, ಹಲವೆಡೆ ಮಕ್ಕಳಿಗೆ ಆಟವಾಡಲು ಮೈದಾನ ಸಿಗುತ್ತಿಲ್ಲ. ಇದಕ್ಕೂ ಮುನ್ನ ಕೆಲವು ಮಕ್ಕಳು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ನಾವು ರಸ್ತೆಯಲ್ಲಿ ಕ್ರಿಕೆಟ್ ಆಡುವಾಗ ಅಲ್ಲಿ ವಾಸಿಸುವ ಜನರಿಗೆ ಸಮಸ್ಯೆಗಳಾಗುತ್ತಿವೆ. ಮಕ್ಕಳು ದೈಹಿಕವಾಗಿ ಕ್ರಿಯಾಶೀಲರಾಗಿರುವಾಗ ಅವರ ಮಾನಸಿಕ ಬೆಳವಣಿಗೆ ವೇಗವಾಗಿ ಆಗುತ್ತದೆ. ಅದೇ ವೇಳೆ ಫಿಟ್ನೆಸ್ ಕಾಯ್ದುಕೊಳ್ಳುವ ಸೌಲಭ್ಯಗಳು ಸಿಗದಿದ್ದಾಗ ಮಕ್ಕಳು ಕಂಪ್ಯೂಟರ್, ಫೋನ್, ಲ್ಯಾಪ್ಟಾಪ್ನಲ್ಲಿ ಕಾಲ ಕಳೆಯುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕಡಿಮೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ಆಟದ ಮೈದಾನಗಳು ಅಗತ್ಯ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಆಟದ ಮೈದಾನಗಳಿಗೆ ಸಂಬಂಧಿಸಿದ ನೀತಿಗಳನ್ನು ವಿವರಿಸಲು ಸರ್ಕಾರಗಳನ್ನು ಕೇಳಲಾಗಿದೆ. ಮಕ್ಕಳಿಗೆ ಆಟದ ಮೈದಾನಗಳನ್ನು ಒದಗಿಸುವ ‘ಖೇಲೋ ಇಂಡಿಯಾ’ ಕಾರ್ಯಕ್ರಮದ ಅಡಿಯಲ್ಲಿ ನಡೆಸಲಾದ ಯೋಜನೆಗಳ ಬಗ್ಗೆಯೂ ನ್ಯಾಯಾಲಯವು ಪ್ರಶ್ನೆಗಳನ್ನು ಕೇಳಿದೆ ಎಂದು ತಿಳಿದುಬಂದಿದೆ.