ಪಿಎಫ್ಐ ವಿರುದ್ಧದ ದಾಳಿ ಬಿಜೆಪಿಯ ಚುನಾವಣಾ ತಂತ್ರಗಾರಿಕೆ: ರಾಜೇಶ್ ಪವಿತ್ರನ್

Prasthutha|

ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಚೇರಿ ಮತ್ತು ನಾಯಕರ ಮನೆ ಮೇಲೆ ನಡೆದ ಎನ್ ಐಎ ದಾಳಿ ಚುನಾವಣಾ ತಂತ್ರಗಾರಿಕೆಯೇ ಎಂಬ ಅನುಮಾನ ಮೂಡಿದೆ ಎಂದು ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಚುನಾವಣಾ ನಾಟಕ ಆರಂಭವಾಗಿದೆ. ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಎಸ್ ಡಿಪಿಐ, ಪಿಎಫ್ ಐ ನಿಷೇಧದ ಬಗ್ಗೆ ಮಾತಾಡಿತ್ತು. ಅಧಿಕಾರಕ್ಕೆ ಬಂದ ಬಳಿಕ ದಾಖಲೆ ಇಲ್ಲ ಎನ್ನುತ್ತಾ ಬಂದಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದರೂ ಈ ಸಂಘಟನೆಗಳ ನಿಷೇಧ ಆಗಿಲ್ಲ. 2023 ರ ಚುನಾವಣೆ ಬಳಿಕನೂ ಎಸ್ ಡಿಪಿಐ, ಪಿಎಫ್ ಐ ಬ್ಯಾನ್ ಆಗಲ್ಲ ಎಂದು ಅವರು ಭವಿಷ್ಯ ನುಡಿದರು.

ದೇಶದಲ್ಲಿ ನಡೆದ ಎನ್ ಐಎ ದಾಳಿಗೆ ಸಾರ್ವಜನಿಕ ತೆರಿಗೆ ಹಣ ವ್ಯಯಿಸಿದ್ದಾರೆ. ದಾಳಿಗೊಳಗಾದ ಖರ್ಚಿನ ಸಂಪೂರ್ಣ ಮೊತ್ತವನ್ನು ಬಿಜೆಪಿ ಪಕ್ಷ ಭರಿಸಬೇಕು. ಎಸ್ ಡಿಪಿಐ ಜೊತೆ ಬಿಜೆಪಿ ಪಕ್ಷ ಹೊಂದಾಣಿಕೆಯಲ್ಲಿದೆ ಎಂದು ಆರೋಪಿಸಿದ ಅವರು, ಬಿಜೆಪಿಯ ಮೇಲೂ ಎನ್ ಐಎ ದಾಳಿ ಆಗಬೇಕು ಎಂದು ಒತ್ತಾಯಿಸಿದರು.

- Advertisement -

ಎನ್ ಐಎ ದಾಳಿ ಮುಂಬರುವ ಚುನಾವಣೆಯನ್ನು ಕೇಂದ್ರೀಕರಿಸಿದೆ. ಇದೊಂದು ಬೂಟಾಟಿಕೆ ದಾಳಿ ಆಗಬಾರದು. ಈ ಸರ್ಕಾರ ಎನ್ ಐಎ ಬಳಸಿ ನಮ್ಮನ್ನೂ ಬಂಧಿಸಿದರೆ ಅಚ್ಚರಿಪಡಬೇಕಿಲ್ಲ. ಕೇಂದ್ರ ಸರಕಾರ ರಾಷ್ಟ್ರೀಯ ತನಿಖಾ ತಂಡವನ್ನು ದುರುಪಯೋಗಪಡಿಸಿದೆ. ಎನ್ ಐಎ ಅಧಿಕಾರಿಗಳು ದೆಹಲಿಯಿಂದ ಬಂದು ಇಲ್ಲಿ ಪಿಎಫ್ ಐ ನಾಯಕರನ್ನು ಬಂಧಿಸಬೇಕಾದರೆ ರಾಜ್ಯದ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದ ಅವರು, ಬಿಜೆಪಿ ಬಗ್ಗೆ ಕಾರ್ಯಕರ್ತರು ವಿಶ್ವಾಸ ಕಳೆದುಕೊಂಡಿದ್ದಾರೆ. ಇದಕ್ಕಾಗಿಯೇ ಬಿಬಿಎಂಪಿ ಚುನಾವಣೆಯನ್ನು ಮುಂದೂಡುತ್ತಾ ಬಂದಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ, ದಾಳಿ ನಾಟಕ ಮಾಡಿದೆ ಎಂದರು.

ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಮಾತನಾಡಿ, ಹಿಂದೂತ್ವ ಪರ ಇದ್ದೇವೆ ಎನ್ನುವುದನ್ನು ತೋರಿಸಲು ಎನ್ ಐಎ ದಾಳಿ ನಡೆದಿದೆ. ಸರಕಾರ ಹಿಂದೂಗಳನ್ನು ಕೊಲ್ಲುವ ಬದಲು ನೀವೇ ವಿಷ ನೀಡಿ ಸಾಯಬಹುದಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

Join Whatsapp