ಕಾರವಾರ: ಭಾರಿ ಮಳೆಯಿಂದ ತೇವಗೊಂಡ ಮನೆಯ ಗೋಡೆ ಕುಸಿದ ಪರಿಣಾಮ ಮನೆಯಲ್ಲಿ ಮಲಗಿದ್ದ ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ಹಳಿಯಾಳ ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ನಡೆದಿದೆ.
ಮುರ್ಕವಾಡ ಗ್ರಾಮದ ತಾಯಿ ರುಕ್ಮಿಣಿ ವಿಠ್ಠಲ್ ಮಾಚಕ (37) ಹಾಗೂ ಆಕೆಯ ಪುತ್ರಿ ಶ್ರೀದೇವಿ ವಿಠ್ಠಲ್ ಮಾಚಕ (13) ಮೃತಪಟ್ಟವರು.
ಗೋಡೆ ಕುಸಿದು ಬಿದ್ದ ಘಟನೆ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ಬಂದು ಮಣ್ಣು ತೆರವು ಮಾಡಲು ಪ್ರಯತ್ನಿಸಿದರೂ ಮೇಲೇಳಲಾಗದೆ ಇಬ್ಬರೂ ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪ್ರಕಾಶ ಗಾಯಕವಾಡ ಹಾಗೂ ತಾ.ಪಂ ಇ ಒ ಪರಶುರಾಮ್ ಗಸ್ತಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.