ಫರೂಕಾಬಾದ್: ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು 16 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಆರೋಪಿ ಕಾನ್‌ಸ್ಟೆಬಲ್‌ನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ನವಾಬ್‌ಗಂಜ್ ಪ್ರದೇಶದಲ್ಲಿ 11ನೇ ತರಗತಿಯ ವಿದ್ಯಾರ್ಥಿನಿ ಶಾಲೆಗೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಡುಗಿ ಶಾಲೆಯಿಂದ ಮನೆಗೆ ಹಿಂತಿರುಗದಿದ್ದಾಗ, ಆಕೆಯ ಕುಟುಂಬ ಸದಸ್ಯರು ಅವಳನ್ನು ಹುಡುಕಲು ಆರಂಭಿಸಿದರು. ಈ ವೇಳೆ ಕಾನ್‌ಸ್ಟೆಬಲ್ ವಿನಯ್ ಚೌಹಾಣ್ ಅವರ ಕಾರಿನಲ್ಲಿ ತನ್ನ ಮಗಳನ್ನು ನೋಡಿರುವುದಾಗಿ ಹುಡುಗಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.
ಈ ಹಿಂದೆ ನವಾಬ್‌ಗಂಜ್ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಚೌಹಾಣ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ತನಿಖೆ ನಡೆಸುವ ಜವಾಬ್ದಾರಿಯನ್ನು ವೃತ್ತ ಅಧಿಕಾರಿ ರಾಜೇಶ್ ದ್ವಿವೇದಿ ಅವರಿಗೆ ವಹಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಆರತಿ ಸಿಂಗ್ ತಿಳಿಸಿದ್ದಾರೆ.