Home ಟಾಪ್ ಸುದ್ದಿಗಳು ಉತ್ತರ ಪ್ರದೇಶ: ʼಯುಪಿ ಮೇ ಕಾ ಬಾ’ ಖ್ಯಾತಿಯ ಗಾಯಕಿಗೆ ನೋಟಿಸ್‌ ಜಾರಿ!

ಉತ್ತರ ಪ್ರದೇಶ: ʼಯುಪಿ ಮೇ ಕಾ ಬಾ’ ಖ್ಯಾತಿಯ ಗಾಯಕಿಗೆ ನೋಟಿಸ್‌ ಜಾರಿ!

ಲಕ್ನೋ: ಕಳೆದ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆ ಸಂಧರ್ಭದಲ್ಲಿ ‘ಯುಪಿ ಮೇ ಕಾ ಬಾ’ ಎಂಬ ಹಾಡಿನ ಮೂಲಕ ಖ್ಯಾತಿ ಪಡೆದಿದ್ದ ಭೋಜ್‌ ಪುರಿ ಗಾಯಕಿ ನೇಹಾ ಸಿಂಗ್ ರಾಥೋಥ್‌ ಅವರ ಹಾಡಿನಲ್ಲಿ ಪ್ರಚೋದನಕಾರಿ ಸಾಹಿತ್ಯ ಇರುವ ಹಿನ್ನೆಲೆಯಲ್ಲಿ ಕಾನ್ಪುರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ರಾಜಕೀಯ ವಿಚಾರ ಹಾಗೂ ರಾಜಕೀಯ ಪ್ರೇರಿತ ಘಟನೆಗಳನ್ನು ಆಧಾರಿಸಿ ಮಾಡುವ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ಭೋಜ್‌ ಪುರಿ ಹಾಡುಗಳು ಉತ್ತರ ಪ್ರದೇಶದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. 2022 ರಲ್ಲಿ ‘ಯುಪಿ ಮೇ ಕಾ ಬಾ’ ಎನ್ನುವ ಹಾಡನ್ನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ವೇಳೆ ಬರೆದು ನೇಹಾ ಸಿಂಗ್‌ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಆ ಬಳಿಕ ಇದೀಗ ‘ಯುಪಿ ಮೇ ಕಾ ಬಾ’ ಪಾರ್ಟ್‌ -2 ಹಾಡನ್ನು ಬರೆದಿದ್ದಾರೆ. ಈ ಹಾಡಿನಲ್ಲಿ ಇತ್ತೀಚೆಗೆ ಕಾನ್ಪುರದಲ್ಲಿ ಒತ್ತುವರಿ ಕಾರ್ಯಚರಣೆ ವೇಳೆ ತಾಯಿ – ಮಗಳು ಸಜೀವ ದಹನವಾದ ಬಗ್ಗೆ ಬರೆದಿದ್ದಾರೆ. ಬುಲ್ಡೋಜರ್ ಆಡಳಿತದ ಬಗ್ಗೆಯೂ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ. ಇದು ಪ್ರಚೋದನಕಾರಿ ಎಂದು ಕಾನ್ಪುರ ಪೊಲೀಸರು ಗಾಯಕಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ನೋಟಿಸ್ ನಲ್ಲಿ ನೇಹಾ ಸಿಂಗ್‌ ಅವರ ಯೂಟ್ಯೂಬ್‌ ಚಾನೆಲ್‌ ಬಗ್ಗೆ, ಹಾಡಿನ ಸಾಹಿತ್ಯವನ್ನು ಅವರೇ ಬರೆದಿದ್ದಾರೆಯೇ ಅಥವಾ ಸಾಹಿತ್ಯ ಬರೆಯಲು ನಿಮ್ಮ ಬಳಿ ಲಿರಿಕ್ಸ್‌ ರೈಟರ್‌ ಅನುಮತಿ ಕೇಳಿದ್ದಾರೆಯೇ ಅಥವಾ ಆ ಹಾಡನ್ನು ನೀವೇ ಆಪ್ಲೋಡ್‌ ಮಾಡಿದ್ದೀರಾ? ಮುಂತಾದ ಪ್ರಶ್ನೆಗಳನ್ನು ಕೇಳಿ, ನೋಟಿಸ್‌ ಗೆ ಮೂರು ದಿನಗಳ ಒಳಗೆ ಉತ್ತರ ನೀಡಬೇಕು ಎಂದು ಪೊಲೀಸರು ಹೇಳಿದ್ದಾರೆ. ಒಂದು ವೇಳೆ ನೋಟಿಸ್‌ ಗೆ ಸರಿಯಾದ ಉತ್ತರ ನೀಡದೆ ಇದ್ದರೆ, ಕೇಸ್‌ ದಾಖಲು ಮಾಡುತ್ತೇವೆ ಎಂದಿದ್ದಾರೆ.

Join Whatsapp
Exit mobile version