ಅಮೇಠಿ: ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಸುನೀಲ್ (35) ಪೂನಮ್ (32) ದೃಷ್ಟಿ (6) ಹಾಗೂ ಒಂದು ವರ್ಷದ ಗಂಡು ಮಗು ಎಂದು ಗುರುತಿಸಲಾಗಿದೆ.
ಅಮೇಠಿ ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರ ಇರುವ ಪಾನಹುನಾ ಎಂಬಲ್ಲಿ ಸುನೀಲ್ ಅವರು ಸರ್ಕಾರಿ ಶಾಲಾ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅದೇ ಊರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು.
‘ಗುರುವಾರ ರಾತ್ರಿ ಅವರ ಮನೆಯಿಂದ ಗುಂಡಿನ ಸದ್ದು ಕೇಳಿ ನೆರೆಹೊರೆಯವರು ಓಡಿ ಬಂದಾಗ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿರುವುದು ಗೊತ್ತಾಗಿದೆ. ಸುನೀಲ್ ಕುಟುಂಬಕ್ಕೆ ಪರಿಚಿತರಾಗಿದ್ದವರೇ ಕೃತ್ಯ ಎಸಗಿರುವ ಅನುಮಾನ ಇದೆ. ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗೆ ಎರಡು ವಿಶೇಷ ತಂಡ ರಚಿಸಲಾಗಿದೆ’ ಎಂದು ಅಮೇಠಿ ಎಸ್ಪಿ ಅನೂಪ್ ಕುಮಾರ್ ಸಿಂಗ್ ಹೇಳಿದ್ದಾರೆ.