ಸಂಚಾರಿ ನಿಯಮಗಳ ಉಲ್ಲಂಘನೆ ನೆಪದಲ್ಲಿ ಪೊಲೀಸರ ಕಿರುಕುಳ ತಪ್ಪಿಸಿ, ಆಧುನಿಕ ತಂತ್ರಜ್ಞಾನ ಬಳಸಿ : ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ

Prasthutha|

ಬೆಂಗಳೂರು : ರಾಜ್ಯದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪತ್ತೆಗೆ ಆಧುನಿಕ ತಂತ್ರಜ್ಞಾನ ಬಳಸಿ ಪೊಲೀಸರ ಕಿರುಕುಳ ತಪ್ಪಿಸಲು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರದೇಶ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಒತ್ತಾಯಿಸಿದ್ದಾರೆ,

- Advertisement -

ಈ ಕುರಿತು ರಾಜ್ಯದ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಮನವಿ ಸಲ್ಲಿಸಿದ ಅವರು, ಮೈಸೂರಿನ ಬೋಗಾದಿ – ಹಿನಕಲ್ ವರ್ತುಲ ರಸ್ತೆಯಲ್ಲಿ ಸಂಚಾರಿ ಪೊಲೀಸರ ಕಿರುಕುಳದಿಂದ ದೇವರಾಜ್ ಎಂಬುವರು ಮೃತಪಟ್ಟು, ಸುರೇಶ್ ಎಂಬ ವ್ಯಕ್ತಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದುರ್ಘಟನೆ ನಿಜಕ್ಕೂ ಅತ್ಯಂತ ಆಘಾತಕಾರಿ, ಕ್ರೂರ ಮತ್ತು ಅಮಾನವೀಯವಾಗಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಸುಮಾರು 1.90 ಕೋಟಿ ಗೂ ಹೆಚ್ಚು ವಾಹನಗಳಿದ್ದು, ಪ್ರತಿ ವರ್ಷ ವಾಹನಗಳ ಸಂಖ್ಯೆ ಏರುತ್ತಲೇ ಇದೆ. ಮತ್ತೊಂದೆಡೆ ಸರ್ಕಾರ ತನ್ನ ಆದಾಯ ಸಂಗ್ರಹಕ್ಕಾಗಿ ಸಂಚಾರಿ ನಿಯಗಮಗಳ ಉಲ್ಲಂಘನೆಯ ದಂಡದ ಮೊತ್ತ ಸಹ ಏರಿಕೆ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಹೈರಾಣಾಗಿರುವ ಸಂದರ್ಭದಲ್ಲಿ ಹೆದ್ದಾರಿಗಳಲ್ಲಿ ಅವೈಜ್ಞಾನಿಕವಾಗಿ ಟೋಲ್ ಗಳನ್ನು ನಿರ್ಮಿಸಿ ಹಗಲು ದರೋಡೆ ಮಾಡಲಾಗುತ್ತಿದೆ. ಇದೇ ರೀತಿ ವಾಹನ ಸವಾರರ ಸುಲಿಗೆಯೂ ಹೆಚ್ಚಾಗುತ್ತಿದ್ದು, ಜನ ಸಾಮಾನ್ಯರು ಜರ್ಝರಿತರಾಗಿದ್ದಾರೆ ಎಂದು ಹೇಳಿದ್ದಾರೆ.

- Advertisement -

ಸಂಚಾರಿ ಪೊಲೀಸರು ಸಂಚಾರಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವ ತನ್ನ ಮೂಲ ಕರ್ತವ್ಯವನ್ನೇ ಮರೆತಂತೆ ವರ್ತಿಸುತ್ತಿದ್ದಾರೆ. ರಾಜ್ಯದೆಲ್ಲೆಡೆ ಸಣ‍್ಣಪುಟ್ಟ ವ್ಯಾಪಾರಿಗಳು, ರೈತರು, ಜನ ಸಾಮಾನ್ಯರನ್ನೇ ಗುರಿಯಾಗಿಸಿಕೊಂಡು ದಂಡ ವಸೂಲಿ ಮಾಡುವ ಕೆಲಸದಲ್ಲಿ ಸಂಚಾರಿ ಪೊಲೀಸರು ನಿರತರಾಗಿದ್ದಾರೆ. ಕೋವಿಡ್ ಸಂಕಷ್ಟದಿಂದ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವಾಗ ಪೊಲೀಸರ ಈ ವರ್ತನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರಿನ ಬೋಗಾದಿಯಲ್ಲಿ ಇದು ಸ್ಫೋಟಗೊಂಡಿರುವುದು ಸಣ್ಣ ಉದಾಹರಣೆಯಾಗಿದೆ. ಎಲ್ಲಾ ವಲಯಗಳಲ್ಲೂ ಹಗಲು ದರೋಡೆ, ಶೋಷಣೆ ನಡೆಯುತ್ತಿದ್ದು, ಇದರಿಂದ ಜನರ ಆಕ್ರೋಶ ಮಡುಗಟ್ಟಿದೆ. ಇದು ಯಾವ ಹಂತ ತಲುಪುತ್ತದೆಯೋ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ರಕ್ಷಾ ರಾಮಯ್ಯ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಇದು ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಪಾರ್ಕಿಂಗ್ ನಿಯಮ ಉಲ್ಲಂಘಿಸಲಾಗಿದೆ ಎಂದು ಎಲ್ಲೆಂದರಲ್ಲಿ ವಾಹನಗಳನ್ನು ಎತ್ತೋಯ್ದು ದಂಡದ ರೂಪದಲ್ಲಿ ದುಬಾರಿ ಹಣ ವಸೂಲಿ ಮಾಡಲಾಗುತ್ತಿದೆ. ಇದರ ಹಿಂದೆ ಮಾಫೀಯಗಳು ಕೆಲಸ ಮಾಡುತ್ತಿದ್ದು, ಇವರ ಜತೆ ಸಂಚಾರಿ ಪೊಲೀಸರು ಸಹ ಕೈಜೋಡಿಸಿದ್ದಾರೆ. ಜತೆಗೆ ಇತ್ತೀಚೆಗೆ ಸ್ಮಾರ್ಟ್ ಪಾರ್ಕಿಂಗ್ ಎಂಬ ಮತ್ತೊಂದು ಅಕ್ರಮ ದಂಧೆ ಆರಂಭವಾಗಿದೆ. ಸ್ಮಾರ್ಟ್ ಪಾರ್ಕಿಂಗ್ ಹೆಸರಿನಲ್ಲಿ ದುಬಾರಿ ದಂಡ ವಸೂಲಿ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು, ಇವರು ಪರ್ಯಾಯ ಪೊಲೀಸರ ರೀತಿ ವರ್ತಿಸುತ್ತಿರುವುದು ಆಘಾತಕಾರಿಯಾಗಿದ್ದು, ಇದರಿಂದ ಪೊಲೀಸ್ ವ್ಯವಸ್ಥೆಯ ನೈತಿಕ ಸ್ಥೈರ್ಯ ಕುಸಿಯುವುದಿಲ್ಲವೇ?. ಸಂಚಾರಿ ನಿಯಮಗಳ ಉಲ್ಲಂಘನೆ ನೆಪದಲ್ಲಿ ಯಾರು ಬೇಕಾದರೂ, ಹೇಗೆ ಬೇಕಾದರೂ ದಂಡ ವಸೂಲಿ ಮಾಡಬಹುದೇ?. ಇದನ್ನು ನೋಡಿದರೆ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆಯೇ ಎಂಬ ಅನುಮಾನ ಮೂಡುತ್ತದೆ ಎಂದು ರಕ್ಷಾ ರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯ ತಂತ್ರಜ್ಞಾನದಲ್ಲಿ ಮಂಚೂಣಿಯಲ್ಲಿದ್ದು, ಇಡೀ ಜಗತ್ತು ಕರ್ನಾಟಕದತ್ತ ನೋಡುತ್ತಿದೆ. ಇ ಹೈವೆ, ಆಧುನಿಕ ಹೆದ್ದಾರಿಗಳನ್ನು ನಿರ್ಮಾಣ ಮಾಡುತ್ತಿರುವುದಾಗಿ ಸರ್ಕಾರಗಳು ಹೇಳಿಕೊಳ್ಳುತ್ತಿವೆ. ಆದರೆ ಸಂಚಾರಿ ವ್ಯವಸ್ಥೆಯ ಮೇಲೆ ಕಣ್ಗಾವಲಿಡಲು ಇನ್ನು ಯಾಕೆ ಸಮರ್ಪಕವಾಗಿ ತಂತ್ರಜ್ಞಾನ ಬಳಸಿಕೊಳ್ಳುತ್ತಿಲ್ಲ. ದೆಹಲಿಯಲ್ಲಿ ತಂತ್ರಜ್ಞಾನದ ಮೂಲಕವೇ ಸಂಚಾರಿ ವ್ಯವಸ್ಥೆಯನ್ನು ನಿಯಂತ್ರಿಸಲಾಗುತ್ತಿದೆ. ಐಟಿ-ಬಿಟಿಯಲ್ಲಿ ಜಗತ್ತು ವಿಸ್ಮಯಗೊಳ್ಳುವಂತೆ ಬೆಳೆಯುತ್ತಿರುವ ಬೆಂಗಳೂರು ನಗರ ಮತ್ತು ರಾಜ್ಯದಲ್ಲಿ ಸಂಚಾರಿ ನಿಯಮಗಳ ಪರಿಪಾಲನೆಗೆ ಪೂರ್ಣ ಪ್ರಮಾಣದಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವ ಅಗತ್ಯತೆ ಹೆಚ್ಚಾಗಿದೆ. ತಂತ್ರಜ್ಞಾನದ ಸದ್ಭಳಕೆಯಿಂದ ಸಂಚಾರಿ ಪೊಲೀಸರ ಹಸ್ತಕ್ಷೇಪ, ಭ್ರಷ್ಟಾಚಾರ ಮತ್ತು ಜನರ ಕಿರುಕುಳ ತಪ್ಪಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಕೂಡಲೇ ತಾವು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಬೇಕು, ಕೋವಿಡ್ ನಂತರದ ದಿನಗಳಲ್ಲಿ ಸಾಮಾನ್ಯರು ಮತ್ತು ಪೊಲೀಸರ ನಡುವಿನ ಸಂಘರ್ಷ ತಪ್ಪಿಸುವ ಜತೆಗೆ ಪೊಲೀಸರು ಮತ್ತುಷ್ಟು ಜನ ಸ್ನೇಹಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮನವಿ ಸ್ವೀಕರಿಸಿದ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂಧ‍್, ತಂತ್ರಜ್ಞಾನ ಬಳಕೆಯಲ್ಲಿ ಇಲಾಖೆ ಸದಾ ಮಂಚೂಣಿಯಲ್ಲಿದೆ. ಕೆಲವು ತಾಂತ್ರಿಕ ತೊಡಗಕುಗಳು ಎದುಗಾಗಿದ್ದು, ಇವುಗಳನ್ನು ನಿವಾರಿಸಿ ಸಮಸ್ಯೆ ಅಗತ್ಯ ಕ್ರಮ ಕೈಗೊಳ್ಳಾಗುವುದು. ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿರುವುದಾಗಿ ರಕ್ಷಾ ರಾಮಯ್ಯ ತಿಳಿಸಿದ್ದಾರೆ. ನಿಯೋಗದಲ್ಲಿ ಕೆಪಿಐಸಿಸಿ ಉಪಾಧ್ಯಕ್ಷರಾದ ಭವ್ಯ, ಯುವ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಉಪಸ್ಥಿತರಿದ್ದರು.

Join Whatsapp