ವಾಷಿಂಗ್ಟನ್: ಶ್ವೇತಭವನದಲ್ಲಿ ಸೇರಿದ್ದ ಸಾವಿರಾರು ಮಂದಿಯ ಸಮಕ್ಷಮದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಲಿಂಗ ವಿವಾಹ ಕಾನೂನಿಗೆ ಮಂಗಳವಾರ ಸಹಿ ಹಾಕಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಬೈಡನ್, ಈ ಕಾನೂನು ಸಲಿಂಗ ವಿವಾಹವನ್ನು ದ್ವೇಷಿಸುವವರ ವಿರುದ್ಧದ ಪ್ರತಿರೋಧವಾಗಿದೆ. ಆದ್ದರಿಂದ ಈ ಕಾನೂನು ಪ್ರತಿಯೊಬ್ಬ ಅಮೆರಿಕನ್ನರಿಗೂ ಮುಖ್ಯವಾಗಿದೆ ಎಂದು ಹೇಳಿದರು.
ಗಾಯಕರಾದ ಸ್ಯಾಮ್ ಸ್ಮಿತ್ ಮತ್ತು ಸಿಂಡಿ ಲಾಪರ್ ಹಾಡಿನ ಮೂಲಕ ಅಮೆರಿಕ ಅಧ್ಯಕ್ಷರ ಈ ನಡೆಯನ್ನು ಶ್ಲಾಘಿಸಿದ್ದು, ಅಲ್ಲಿ ಸೇರಿದ್ದ ಸಲಿಂಗಿಗಳು ಸಂಭ್ರಮಾಚರಣೆ ಮಾಡಿದರು. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸಲಿಂಗ ವಿವಾಹವನ್ನು ನೆರವೇರಿಸಿದರು.
ಅಮೆರಿಕದ ಎರಡೂ ಪಕ್ಷಗಳ ಸಂಸದರು ಸಮಾರಂಭದಲ್ಲಿ ಭಾಗವಹಿಸಿದ್ದರು. ಇದು ಹಿಂದೊಮ್ಮೆ ದೇಶದ ಅತ್ಯಂತ ವಿವಾದಾತ್ಮಕ ವಿಷಯಗಳಲ್ಲಿ ಒಂದಾಗಿದ್ದ ಸಲಿಂಗ ವಿವಾಹದ ಬಗ್ಗೆ ಹೆಚ್ಚುತ್ತಿರುವ ಸ್ವೀಕಾರವನ್ನು ಪ್ರತಿಬಿಂಬಿಸಿತ್ತು.
ಈ ಮಧ್ಯೆ, ಒಂದು ದಶಕದ ಹಿಂದೆ ಬೈಡನ್ ಉಪಾಧ್ಯಕ್ಷರಾಗಿದ್ದ ವೇಳೆ ಟಿವಿ ಸಂದರ್ಶನವೊಂದರಲ್ಲಿ ಸಲಿಂಗ ವಿವಾಹಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸುವ ಮೂಲಕ ರಾಜಕೀಯ ಕೋಲಾಹಲವನ್ನು ಉಂಟುಮಾಡಿದ್ದ ವೀಡಿಯೊವನ್ನು ಶ್ವೇತಭವನದಲ್ಲಿ ಪ್ರದರ್ಶಿಸಲಾಯಿತು.