ನ್ಯೂಯಾರ್ಕ್: ಪೋರ್ನ್ ಸ್ಟಾರ್ ಗೆ ಹಣ ನೀಡಿದ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಲಾಗಿದೆ.
2016 ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ತಮ್ಮ ನಡುವಿನ ಸಂಬಂಧವನ್ನು ಗೌಪ್ಯವಾಗಿಡಲು ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ಗೆ 1.30 ಲಕ್ಷ ಅಮೆರಿಕನ್ ಡಾಲರ್ ನೀಡಿರುವ ಆರೋಪ ಟ್ರಂಪ್ ಮೇಲೆ ಇದೆ.
ಇದೀಗ ಟ್ರಂಪ್ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಮೊದಲ ಅಮೆರಿಕದ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ.
ಏನಿದು ಪ್ರಕರಣ?
ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬುದು ತಿಳಿದುಬಂದಿದೆ.
ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿರುವ ಟ್ರಂಪ್ ಗೆ ಈ ಬಂಧನ ಭಾರೀ ಹಿನ್ನಡೆಯಾಗಲಿದೆ. ಅಮೆರಿಕದಲ್ಲಿ ದೋಷಾರೋಪಣೆಗೊಳಗಾದವರು ಅಥವಾ ಜೈಲಿನಲ್ಲಿರುವವರಿಗೆ ಚುನಾವಣೆಯಲ್ಲಿ ಸ್ಪರ್ಧೆ ನಿಷೇಧಿಸುವ ಯಾವುದೇ ಕಾನೂನು ಇಲ್ಲದಿದ್ದರೂ, ವಿರೋಧಿಗಳು ಇದನ್ನೇ ಅಸ್ತ್ರವಾಗಿ ಬಳಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.