Home ಟಾಪ್ ಸುದ್ದಿಗಳು ಅಮೆರಿಕ ಚುನಾವಣೆ | ಶಾಂತಿ ಕಾಪಾಡುವಂತೆ, ಜೊತೆಯಾಗಿ ಮುನ್ನಡೆಯುವಂತೆ ಬೈಡನ್ ಕರೆ

ಅಮೆರಿಕ ಚುನಾವಣೆ | ಶಾಂತಿ ಕಾಪಾಡುವಂತೆ, ಜೊತೆಯಾಗಿ ಮುನ್ನಡೆಯುವಂತೆ ಬೈಡನ್ ಕರೆ

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟ್ ಅಭ್ಯರ್ಥಿ ಜೋ ಬೈಡನ್ ಗೆಲುವಿನ ಸಮೀಪ ಧಾವಿಸಿದ್ದು, ಪೆನ್ಸಿಲ್ವಾನಿಯಾ ರಾಜ್ಯದಲ್ಲಿ ಒಂದು ಗೆಲುವು ಸಾಧಿಸಿದರೆ, ಅವರು ಶ್ವೇತಭವನ ಪ್ರವೇಶಿಸುವುದು ಖಚಿತವಾಗಲಿದೆ. ನೆವಡಾ ಮತ್ತು ಅರಿಝೊನದಲ್ಲೂ ಬೈಡನ್ ಮುನ್ನಡೆ ಸಾಧಿಸುತ್ತಿದ್ದಾರೆ. ಜಾರ್ಜಿಯಾದಲ್ಲೂ ಅಲ್ಪ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಈ ನಡುವೆ ಮತ್ತೊಮ್ಮೆ ದೇಶವನ್ನುದ್ದೇಶಿಸಿ ಮಾತನಾಡಿರುವ ಬೈಡನ್, “ನಾವು ಪ್ರತಿಪಕ್ಷದವರಿರಬಹುದು, ಆದರೆ ಶತ್ರುಗಳಲ್ಲ. ನಾವು ಅಮೆರಿಕನ್ನರು’’ ಎಂದು ಹೇಳಿರುವ ಬೈಡನ್, ದ್ವೇಷ ಬಿಟ್ಟು, ಜೊತೆಯಾಗಿ ಮುನ್ನಡೆಯೋಣ ಎಂದಿದ್ದಾರೆ.

“ನಾವು ಶಾಂತಿ, ತಾಳ್ಮೆಯಿಂದಿರಬೇಕು. ನಾವು ಎಲ್ಲಾ ಮತಗಳ ಎಣಿಕೆ ಪ್ರಕ್ರಿಯೆಯ ಕೆಲಸ ನಡೆಯಲು ಬಿಟ್ಟರೆ, ಪ್ರಜಾಪ್ರಭುತ್ವ ಕೆಲಸ ಮಾಡುತ್ತದೆ. ನಿಮ್ಮ ಮತಗಳು ಎಣಿಕೆಯಾಗಲಿವೆ. ಜನರು ಹೇಗೆ ಅದನ್ನು ತಡೆಯಲು ಯತ್ನಿಸುತ್ತಾರೋ, ಅದರ ಬಗ್ಗೆ ನನಗೆ ಚಿಂತೆಯಿಲ್ಲ. ಆ ರೀತಿ ನಡೆಯಲು ನಾನು ಬಿಡುವುದಿಲ್ಲ’’ ಎಂದು ಬೈಡನ್ ಹೇಳಿದ್ದಾರೆ.

ಬೈಡನ್ ಗೆಲುವು ಬಹುತೇಕ ಖಚಿತವಾಗುತ್ತಿದ್ದಂತೆಯೇ ಮುಂದಿನ ಕಾರ್ಯಸೂಚಿ ಕುರಿತು ಈಗಾಗಲೇ ಚರ್ಚೆಗಳನ್ನು ಆರಂಭಿಸಿದ್ದಾರೆ. ತಾವು ಮತ್ತು ಕಮಲಾ ಹ್ಯಾರಿಸ್ (ಉಪಾಧ್ಯಕ್ಷೀಯ ಅಭ್ಯರ್ಥಿ) ಮುಂದಿನ ದಿನಗಳಲ್ಲಿ ಕೋವಿಡ್ 19 ಮತ್ತು ಆರ್ಥಿಕತೆಯನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಚರ್ಚಿಸಲು ತಜ್ಞರನ್ನು ಭೇಟಿಯಾದೆವು. ಕಳೆದು ಹೋದ ಜೀವಗಳನ್ನು ನಾವು ರಕ್ಷಿಸಲು ಸಾಧ್ಯವಿಲ್ಲ, ಆದರೆ ಮುಮದಿನ ದಿನಗಳಲ್ಲಿ ಸಾಕಷ್ಟು ಜೀವಗಳನ್ನು ನಾವು ರಕ್ಷಿಸಬಹುದು ಎಂದು ಬೈಡನ್ ಹೇಳಿದ್ದಾರೆ.

Join Whatsapp
Exit mobile version