ಕ್ಯಾಲಿಫೋರ್ನಿಯಾ: ಚರ್ಚ್‌ವೊಂದರಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ಒಬ್ಬರು ಮೃತಪಟ್ಟಿದ್ದು, ನಾಲ್ಕು ಮಂದಿ ಗಾಯಗೊಂಡ ಘಟನೆ ಲುಗಾನಾ ವುಡ್ಸ್ ನಗರದಲ್ಲಿ ನಡೆದಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಚರ್ಚ್‌ನಲ್ಲಿ ಸೇವಾಕಾರ್ಯಗಳು ಮುಗಿದ ಬಳಿಕ ಅನುಯಾಯಿಗಳು ಔತಣಕೂಟದಲ್ಲಿ ಪಾಲ್ಗೊಂಡಿದ್ದ ವೇಳೆ ನುಗ್ಗಿದ ಬಂದೂಕುಧಾರಿ ದಾಳಿ ಆರಂಭಿಸಿದ್ದಾನೆ. ಚರ್ಚ್‌ಗೆ ನಿರಂತರವಾಗಿ ಭೇಟಿ ನೀಡುವವರು, ಅಧಿಕಾರಿಗಳು ಸ್ಥಳಕ್ಕೆ ಧಾವಿಸುವುದಕ್ಕೂ ಮೊದಲೇ ದಾಳಿಕೋರನನ್ನು ಹಿಡಿದಿದ್ದು,. ಆತನಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಚರ್ಚ್‌ಗೆ ನಿರಂತರವಾಗಿ ಭೇಟಿ ನೀಡುವವರ ಗುಂಪು ಸಂಭವಿಸಬಹುದಾಗಿದ್ದ ಹೆಚ್ಚಿನ ಸಾವು–ನೋವುಗಳನ್ನು ಧೈರ್ಯದಿಂದ ತಡೆದಿದ್ದಾರೆ. ದಾಳಿ ನಡೆಯಲಿರುವ ಕಾರಣ ತಿಳಿಯಲು ತನಿಖೆ ನಡೆಸಲಾಗುತ್ತಿದೆ. ದಾಳಿಕೋರ ಏಷ್ಯಾ ಮೂಲದ 60 ವರ್ಷದ ವ್ಯಕ್ತಿ ಎನ್ನಲಾಗಿದೆ ಎಂದು ಚರ್ಚ್ ಮೂಲಗಳು ತಿಳಿಸಿವೆ.
ನ್ಯೂಯಾರ್ಕ್‌ನ ಬಫಲೊ ನಗರದ ಸೂಪರ್‌ಮಾರ್ಕೆಟ್‌ನಲ್ಲಿ ಶನಿವಾರ ‘ಜನಾಂಗೀಯ ಪ್ರೇರಿತ’ ಗುಂಡಿನ ದಾಳಿ ನಡೆದಿತ್ತು. 18 ವರ್ಷದ ದುಷ್ಕರ್ಮಿಯೊಬ್ಬ ನಡೆಸಿದ್ದ ಈ ಕೃತ್ಯದಿಂದಾಗಿ ವೇಳೆ 10 ಮಂದಿ ಆಫ್ರಿಕನ್ ಅಮೆರಿಕನ್ನರು ಮೃತಪಟ್ಟಿದ್ದರು.
ಹೂಸ್ಟನ್‌ನ ಜನನಿಬಿಡ ಮಾರ್ಕೆಟ್‌ವೊಂದರಲ್ಲಿ ಭಾನುವಾರ ನಡೆದ ಗುಂಡಿನ ದಾಳಿ ವೇಳೆ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.