ವಾಷಿಂಗ್ಟನ್: “ಸಂಪೂರ್ಣವಾಗಿ ಕೊವಿಡ್ ಲಸಿಕೆ ಹಾಕಿಸಿಕೊಂಡ ಜನರು ಮಾಸ್ಕ್ ಧರಿಸದೇ ಅಥವಾ ದೈಹಿಕ ಅಂತರ ಕಾಪಾಡಿಕೊಳ್ಳದೇ ಚಟುವಟಿಕೆಗಳನ್ನು ಪುನರಾರರಂಭಿಸಬಹುದು” ಎಂದು ಅಮೆರಿಕಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಸೂಚಿಸಿದೆ.
“ಪೂರ್ಣ ಮಟ್ಟದಲ್ಲಿ ಲಸಿಕೆ ಹಾಕಿಸಿಕೊಂಡ ಜನರು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಅಮೇರಿಕಾದೊಳಗೆ ಸಂಚರಿಸುವ ಪ್ರಯಾಣಿಕರು ಪ್ರಯಾಣದ ಮೊದಲು ಅಥವಾ ಬಳಿಕ ಕ್ವಾರಂಟೈನ್‌ಗೆ ಒಳಗಾಗುವ ಅವಶ್ಯಕತೆ ಇಲ್ಲ. ತೀವ್ರ ಅನಾರೋಗ್ಯ ಹಾಗೂ ಸಾವನ್ನು ತಡೆಗಟ್ಟುವಲ್ಲಿ ಲಸಿಕೆ ಪರಿಣಾಮಕಾರಿ ಎನಿಸಿದೆ” ಎಂದು ತಿಳಿಸಿದೆ. ಸಿಡಿಸಿ ಸಲಹೆ ನೀಡಿದ ಬೆನ್ನಲ್ಲೇ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮಾಸ್ಕ್ ಧರಿಸದೇಯೇ ಶ್ವೇತಭವನದ ರೋಸ್ ಗಾರ್ಡನ್‌ನಲ್ಲಿ ವರದಿಗಾರರ ಮುಂದೆ ಹಾಜರಾಗಿದ್ದಾರೆ.
ಬಿಡೆನ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಇದೊಂದು ದೊಡ್ಡ ಮೈಲಿಗಲ್ಲು ಎಂದು ನಾನು ಭಾವಿಸುತ್ತೇನೆ. ನಾವು ಅಮೇರಿಕನ್ನರಿಗೆ ಶೀಘ್ರವೇ ಲಸಿಕೆ ಹಾಕುವಲ್ಲಿ ಯಶಸ್ವಿಯಾದ ಕಾರಣ ಇದು ಸಾಧ್ಯವಾಗಿದೆ” ಎಂದಿದ್ದಾರೆ. “ಸಂಪೂರ್ಣವಾಗಿ ಕೊರೊನಾ ಲಸಿಕೆ ಹಾಕಿಕೊಂಡವರಿಗೆ ಕೊರೊನಾ ಸೋಂಕು ತಗುಲುವ ಕಡಿಮೆ ಅಪಾಯ ಹೊಂದಿರುತ್ತಾರೆ. ಹಾಗಾಗಿ ಸಂಪೂರ್ಣ ಲಸಿಕೆ ಹಾಕಿಸಿಕೊಂಡವರು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಆದರೆ, ಲಸಿಕೆ ಹಾಕಿಸಿಕೊಳ್ಳದವರು ಹಾಗೂ ಮೊದಲ ಡೋಸ್ ಹಾಕಿಸಿಕೊಳ್ಳದಿದ್ದಲ್ಲಿ ಮಾಸ್ಕ್ ಧರಿಸಬೇಕು” ಎಂದಿದ್ದಾರೆ.