Home ಜಾಲತಾಣದಿಂದ ಮಂಡ್ಯದಲ್ಲಿ ಮೋದಿ ಸ್ವಾಗತಕ್ಕೆ ಹಾಕಲಾಗಿದ್ದ ವಿವಾದಿತ ಉರಿಗೌಡ-ನಂಜೇಗೌಡ ಕಟೌಟ್ ತೆರವು

ಮಂಡ್ಯದಲ್ಲಿ ಮೋದಿ ಸ್ವಾಗತಕ್ಕೆ ಹಾಕಲಾಗಿದ್ದ ವಿವಾದಿತ ಉರಿಗೌಡ-ನಂಜೇಗೌಡ ಕಟೌಟ್ ತೆರವು

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿವಾದಿತ ಉರಿಗೌಡ ಹಾಗೂ ದೊಡ್ಡ ನಂಜೇಗೌಡ ಮಹಾದ್ವಾರ ಎಂದು ಹಾಕಲಾಗಿದ್ದ ಬ್ಯಾನರ್ ತೆರವುಗೊಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ರೋಡ್ ಶೋ ನಡೆಸುವ ಮಾರ್ಗದಲ್ಲಿ ಕಪೋಲ ಕಲ್ಪಿತ ಪಾತ್ರಗಳಾದ ಉರಿಗೌಡ ಹಾಗೂ ದೊಡ್ಡ ನಂಜೇಗೌಡ ಮಹಾದ್ವಾರ ಹೆಸರಿನಲ್ಲಿ ಕಟೌಟ್ ಹಾಕಲಾಗಿತ್ತು. ಮಂಡ್ಯದಲ್ಲೇ ಇದಕ್ಕೆ ತೀವ್ರ ಆಕ್ರೋಶ, ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದ ಈ ವಿವಾದಿತ ಬ್ಯಾನರ್ ದ್ವಾರವನ್ನು ರಾತ್ರೋ ರಾತ್ರಿ ತೆರವುಗೊಳಿಸಲಾಗಿದ್ದು, ಈ ಸ್ಥಳದಲ್ಲಿ ಬಾಲಗಂಗಾಧರನಾಥ್ ಸ್ವಾಮೀಜಿ ಮಹಾದ್ವಾರ ಎಂದು ಬ್ಯಾನರ್ ಹಾಕಲಾಗಿದೆ.

ಮಂಡ್ಯದ ಗೆಜ್ಜಲಗೆರೆಯಲ್ಲಿ ನರೇಂದ್ರ ಮೋದಿ ಅವರು ಇಂದು (ಮಾ.12) ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ವೇ ಉದ್ಘಾಟಿಸಲಿದ್ದಾರೆ. ಅಲ್ಲದೇ ನಗರ ವ್ಯಾಪ್ತಿಯಲ್ಲಿ 1.8 ಕಿ.ಮೀ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಗದುದ್ದಕ್ಕೂ ಕಟೌಟ್ಗಳಿಂದ ನಾಲ್ಕು ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ರೋಡ್ ಶೋ ಆರಂಭವಾಗುವ ಪ್ರವಾಸಿ ಮಂದಿರದ ಬಳಿ ಸರ್.ಎಂ. ವಿಶ್ವೇಶ್ವರಯ್ಯ, ಜೆಸಿ ವೃತ್ತದಲ್ಲಿ ಕೆಂಪೇಗೌಡ, ಮಹಾವೀರ ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾದ್ವಾರ ಹಾಕಲಾಗಿದೆ. ಈ ಮೂರು ದ್ವಾರಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದ್ರೆ ನಾಲ್ಕನೇ ಮಹಾದ್ವಾರ ಫ್ಯಾಕ್ಟರಿ ಸರ್ಕಲ್ನಲ್ಲಿ ಹಾಕಲಾಗಿದ್ದ ಉರಿಗೌಡ ಮತ್ತು ದೊಡ್ಡನಂಜೇಗೌಡ ಮಹಾದ್ವಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಟ್ವೀಟ್ ಮಾಡಿ, ಸ್ವಾಗತಕ್ಕಾಗಿ ಕಪೋಲ ಕಲ್ಪಿತ ಪಾತ್ರಗಳಾದ ಉರಿಗೌಡ-ನಂಜೇಗೌಡ ಹೆಸರಿನ ಕಮಾನು ಹಾಕಿರುವುದು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದ ಮಂಡ್ಯಕ್ಕೆ ಮಾತ್ರವಲ್ಲ ಇಡೀ ಕರ್ನಾಟಕದ ಜನತೆಗೆ ಮಾಡಿರುವ ಅವಮಾನ. ತಕ್ಷಣ ಮಧ್ಯೆ ಪ್ರವೇಶಿಸಿ ಈ ಸ್ವಾಗತ ಕಮಾನನ್ನು ಕಿತ್ತು ಹಾಕಿಸಬೇಕು ಎಂದು ಆಗ್ರಹಿಸಿದ್ದರು.

Join Whatsapp
Exit mobile version