ಫ್ರಾನ್ಸ್ ನಲ್ಲಾದ ಹತ್ಯೆಯ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ತನ್ನ ಮೇಲೆ ಎಫ್.ಐ.ಆರ್ ದಾಖಲಿಸಲಾದ ಕುರಿತು ಪ್ರಖ್ಯಾತ ಕವಿ ಮುನವ್ವರ್ ರಾಣಾ, ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಬಳಿಯಿರುವ ಲೇಖನಿ ಸತ್ಯವನ್ನು ಬರೆಯುವುದಕ್ಕಾಗಿ ಇರುವುದೇ ಹೊರತು ಪೈಜಾಮಾದ ದಾರ ಹಾಕುವುದಕ್ಕಾಗಿ ಇರುವುದಲ್ಲ ಎಂದು ಅವರು ಹೇಳಿದ್ದಾರೆ.
ತಾನು ಜೈಲಿಗೆ ಹೋಗಲು ಮತ್ತು ಜೈಲಿನಲ್ಲೇ ಸಾಯಲು ಸಿದ್ಧನಿದ್ದೇನೆ. ಆದರೆ ಮಾತಾನಾಡುವುದನ್ನು ಮತ್ತು ಸತ್ಯವನ್ನು ಬರೆಯುವುದನ್ನು ಬಿಡಲಾರೆ ಎಂದು ಅವರು ನೇರವಾಗಿ ಹೇಳಿದ್ದಾರೆ.
ಫ್ರಾನ್ಸ್ ನಲ್ಲಿ ಪ್ರವಾದಿ ಮುಹಮ್ಮದ್ ರ ಕುರಿತು ವಿವಾದಾತ್ಮಕ ವ್ಯಂಗ್ಯಚಿತ್ರವನ್ನು ರಚಿಸಿದ ವ್ಯಂಗ್ಯಚಿತ್ರಕಾರನ ಹತ್ಯೆಯ ಕುರಿತು ಸಮರ್ಥಿಸುವ ಹೇಳಿಕೆಯನ್ನು ನೀಡಿದ್ದಾರೆ ಎಂಬ ಆರೋಪದಲ್ಲಿ ಮುನವ್ವರ್ ರಾಣಾ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿತ್ತು. “ಧರ್ಮವು ತಾಯಿಯಂತೆ. ಯಾರಾದರೂ ತಮ್ಮ ತಾಯಿ ಅಥವಾ ಧರ್ಮದ ಕುರಿತು ಕೆಟ್ಟದಾಗಿ ವ್ಯಂಗ್ಯ ಚಿತ್ರ ರಚಿಸಿದರೆ, ನಿಂದಿಸಿದರೆ ಕೋಪದಲ್ಲಿ ಇಂತಹ ಘಟನೆಗೆ ಬಲವಂತವುಂಟಾಗುತ್ತದೆ” ಎಂದು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರೆಂದು ಆರೋಪಿಸಲಾಗಿತ್ತು.
ಮುಸ್ಲಿಮರನ್ನು ಕೆಣಕುವುದಕ್ಕಾಗಿ ಈ ವಿವಾದಿತ ವ್ಯಂಗ್ಯ ಚಿತ್ರವನ್ನು ರಚಿಸಲಾಗಿತ್ತು ಎಂದೂ ಅವರು ಹೇಳಿದ್ದರು. ಅವರ ಈ ಭಾಷಣಕ್ಕೆ ಸಂಬಂಧಿಸಿದಂತೆ ಲಕ್ನೊ ದಲ್ಲಿ ಪೊಲೀಸ್ ಅಧಿಕಾರಿಯೊಬ್ಬರ್ ಎಫ್.ಐ.ಆರ್ ದಾಖಲಿಸಿದ್ದರು.