ಬಿರುಗಾಳಿಗೆ 30ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಕೊಚ್ಚಿನ್: ಎರ್ನಾಕುಲಂ ಜಿಲ್ಲೆಯ ಕೋದಮಂಗಲಂ ಪುರಸಭಾ ವ್ಯಾಪ್ತಿಯಲ್ಲಿ ಭಾರಿ ಗಾಳಿ ಮಳೆಗೆ ವ್ಯಾಪಕ ಹಾನಿಯಾಗಿದ್ದು, ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವೆಡೆ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೆ ಸವಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುಮಾರು ಹತ್ತು ನಿಮಿಷಗಳ ಕಾಲ ಬೀಸಿದ ಬಿರುಗಾಳಿಗೆ ಕೋದಮಂಗಲಂನಲ್ಲಿ ಸುಮಾರು 30 ಮನೆಗಳು ನಾಶವಾಗಿವೆ. ಕವಲಂಙಾಡ್ ಪಂಚಾಯಿತಿಯ ನೆಲ್ಲಿಮಟ್ಟಂ, ಕಟ್ಟಟ್ಟುಕುಳಂ, ತೃಕಾರಿಯೂರು ಪುರಸಭೆಯ ಮಲಯಂಕೀಝ್ ಗೋಮೆಂತಪಾಡಿ ಮತ್ತು ವಲಿಯಾಪಾರ ಪ್ರದೇಶಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ.
ಇದೇ ವೇಳೆ ರಸ್ತೆಯಲ್ಲಿ ಸಾಗುತ್ತಿದ್ದ ದ್ಬಿಚಕ್ರ ವಾಹನ ಸವಾರರು ಮತ್ತು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರ ಮೇಲೆ ವಿದ್ಯುತ್ ಕಂಬ ಮತ್ತು ಮರದ ಬೃಹತ್ ಕೊಂಬೆಯೊಂದು ಬೀಳುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಈ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ವೈರಲ್ ಆಗಿದೆ.
ಗಾಳಿಯ ರಭಸಕ್ಕೆ ಹೆಚ್ಚಿನವರು ಮನೆ ತೊರೆದು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆದಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದ ನೇತೃತ್ವದಲ್ಲಿ ಸಂಚಾರ ಸುಗಮಗೊಳಿಸುವ ಪ್ರಯತ್ನ ಪ್ರಗತಿಯಲ್ಲಿದೆ.