Home ಕರಾವಳಿ ಉಪ್ಪಿನಂಗಡಿ: ಮತದಾನ ಜಾಗೃತಿ ಜಾಥಾ, ಬೀದಿನಾಟಕ ಪ್ರದರ್ಶನ

ಉಪ್ಪಿನಂಗಡಿ: ಮತದಾನ ಜಾಗೃತಿ ಜಾಥಾ, ಬೀದಿನಾಟಕ ಪ್ರದರ್ಶನ

ಉಪ್ಪಿನಂಗಡಿ: ಪುತ್ತೂರು ವಿಧಾನಸಭಾ ಕ್ಷೇತ್ರದ ವಿವಿಧೆಡೆ ಮತದಾನದ ಮಹತ್ವವನ್ನು ಸಾರುವ ಸಲುವಾಗಿ ಬೀದಿನಾಟಕ, ಜಾಥಾ ಮೂಲಕ ಮತದಾರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೇಳಿದರು.


ಅವರು ಏ.26 ರಂದು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ, ಪುತ್ತೂರು ತಾಲೂಕು ಸ್ವೀಪ್ ಸಮಿತಿ, ಉಪ್ಪಿನಂಗಡಿ ಗ್ರಾಮ ಪಂಚಾಯತ್, ಸರಕಾರಿ ಪ್ರಥಮದರ್ಜೆ ಕಾಲೇಜು ಉಪ್ಪಿನಂಗಡಿ, ರೋಟರಿ ಪುತ್ತೂರು ಎಲೈಟ್, ರೋಟರಿ ಉಪ್ಪಿನಂಗಡಿ ಹಾಗೂ ರೋಟರ್ಯಾಕ್ಟ್ ಕ್ಲಬ್ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಸಂಸಾರ ಜೋಡುಮಾರ್ಗ ಇವರ ಸಹಯೋಗದಲ್ಲಿ ಹಮ್ಮಿಕೊಂಡು ಚುನಾವಣಾ ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.


ಮತದಾನ ಮಾಡುವ ಮೂಲಕ ಸಂವಿಧಾನ ನೀಡಿದ ಹಕ್ಕನ್ನು ಎಲ್ಲರೂ ಚಲಾಯಿಸಬೇಕು. ಯಾವುದೇ ಆಮಿಷಗಳಿಗೆ ಬಲಿಯಾಗದೆ ಎಲ್ಲರೂ ಮೇ.10 ರಂದು ಮತದಾನ ಮಾಡಬೇಕು ಎಂದು ಹೇಳಿದರು.
ಆಕರ್ಷಕ ಜಾಥಾ, ಬೀದಿನಾಟಕ
ಚೆಂಡೆ- ಕೊಂಬು, ವಾದ್ಯ-ಘೋಷದೊಂದಿಗೆ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಉಪ್ಪಿನಂಗಡಿ ಬಸ್ ನಿಲ್ದಾಣದವರೆಗೆ ಮತದಾನ ಜಾಗೃತಿಯ ಬ್ಯಾನರ್‌ನೊಂದಿಗೆ ಜಾಥಾ ನಡೆಯಿತು. ʼನಮ್ಮ ಮತ- ನಮ್ಮ ಹಕ್ಕುʼ, ʼಜಾಗೃತ ಮತದಾರ -ಸದೃಢ ಪ್ರಜಾಪ್ರಭುತ್ವದ ಸರದಾರʼ,ʼಮತ ಚಲಾಯಿಸಿ ಜಾಣರೆನಿಸಿʼ,ʼನಿಮ್ಮ ಮತ ಸುಭದ್ರ ಸರಕಾರದ ಆಯ್ಕೆ, ಎಂಬ ಘೋಷಣೆಗಳನ್ನು ಕೂಗುತ್ತ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದರು. ಬಳಿಕ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಬಸ್ ನಿಲ್ದಾಣದಲ್ಲಿದ್ದ ಸಾರ್ವಜನಿಕರು ಇದನ್ನು ವೀಕ್ಷಿಸಿದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಪ್ರತಿಜ್ಞಾವಿಧಿ ಬೋಧಿಸಿದರು.


ದ.ಕ.ಜಿ.ಪಂ. ಉಪಕಾರ್ಯದರ್ಶಿ ಹಾಗೂ ಸೆಕ್ಟರ್ ಆಫೀಸರ್ ಆನಂದ ಕುಮಾರ್, ಯೋಜನಾ ನಿರ್ದೇಶಕರು, ಸೆಕ್ಟರ್ ಆಫೀಸರ್ ಜಯರಾಮ್, ತಾ.ಪಂ. ಯೋಜನಾಧಿಕಾರಿ ಸುಕನ್ಯಾ ಶುಭಹಾರೈಸಿದರು. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಸಂದೀಪ್, ಉಪ್ಪಿನಂಗಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ರೋಟರಿ ಪುತ್ತೂರು ಎಲೈಟ್ ಕ್ಲಬ್ ಸರ್ವೀಸ್ ಡೈರೆಕ್ಟರ್ ಆಸ್ಕರ್ ಆನಂದ್, ಉಪ್ಪಿನಂಗಡಿ ಸರಕಾರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಸುಬ್ಬಪ್ಪ ಕೈಕಂಬ, ಸಹಾಯಕ ಪ್ರಾಧ್ಯಾಪಕರಾದ ಈಶ್ವರಪ್ಪ, ರೋಟರಿ ಉಪ್ಪಿನಂಗಡಿ ಅಧ್ಯಕ್ಷರಾದ ಜಗದೀಶ್, ರಂಗನಿರ್ದೇಶಕ ಮೌನೇಶ ವಿಶ್ವಕರ್ಮ, ಬೂತ್ ಲೆವೆಲ್ ಅಧಿಕಾರಿಗಳು ಉಪಸ್ಥಿತರಿದ್ದರು.


ರಂಗ ನಿದೇರ್ಶಕ ಮೌನೇಶ ವಿಶ್ವಕರ್ಮ ರಚಿಸಿದ್ದು, ನಿರೂಪಕನಾಗಿಯೂ ಪಾತ್ರ ನಿರ್ವಹಿಸಿದ್ದಾರೆ. ಬಾಲು ನಾಯ್ಕ್, ಈಶ್ವರ್ ಬೆಡೇಕರ್, ಚಂದ್ರಮೌಳಿ, ಜಾನ್ಸನ್, ಸ್ವೀಡಲ್, ಹಾರ್ವಿನ್, ಪೃಥ್ವಿ ರಾಜ್., ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಪ್ರಜ್ವಲ್ ಆರ್.ಸಿ., ದಿವ್ಯ ಎಂ., ವೀಣಾ ಕುಮಾರಿ ಎಸ್., ದೀಕ್ಷಿತಾ ಕೆ., ಪಲ್ಲವಿ ಬಿ.ರೈ, ರೇಷ್ಮಾ ವಿ., ಧನ್ಯ.ಕಲಾವಿದರಾಗಿ ಭಾಗವಹಿಸಿದ್ದರು.

Join Whatsapp
Exit mobile version