Home ಕರಾವಳಿ ಉಪ್ಪಿನಂಗಡಿ ಭೀಕರ ಅಪಘಾತ | ತಾಯಿ ಮಗು ಮೇಲೆ ಹರಿದ ಬಸ್ಸು

ಉಪ್ಪಿನಂಗಡಿ ಭೀಕರ ಅಪಘಾತ | ತಾಯಿ ಮಗು ಮೇಲೆ ಹರಿದ ಬಸ್ಸು

ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದ ಬಳಿ ರಸ್ತೆ ದಾಟುತ್ತಿದ್ದ ತಾಯಿ ಮಗು ಮೇಲೆ ಕೆಎಸ್ ಆರ್ ಟಿ ಸಿ ಬಸ್ಸು ಹರಿದ ಪರಿಣಾಮ ಅವರಿಬ್ಬರೂ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿ ಸಿದ್ದೀಕ್ ಎಂಬವರ ಪತ್ನಿ ಶಾಹಿದಾ (25), ಮತ್ತು ಅವರ ಪುತ್ರ ಶಾಹೀನ್ (1) ಮೃತಪಟ್ಟವರು.

ಗೇರುಕಟ್ಟೆಯ ತಾಯಿ ಮನೆಗೆ ಬಂದಿದ್ದ ಶಾಹಿದಾ ಮಂಗಳವಾರ ಬೆಳಗ್ಗೆ ಪುತ್ತೂರಿಗೆ ತನ್ನ ಮಗನೊಂದಿಗೆ ತೆರಳುತ್ತಿದ್ದರು. ಈ ಸಂದರ್ಭ ಬಸ್ ನಿಲ್ದಾಣಕ್ಕೆ ತಿರುಗುವಲ್ಲಿರುವ ನಂದಿನಿ ಹಾಲಿನ ಬೂತ್ ಎದುರಿನಿಂದ ಮತ್ತೊಂದು ಕಡೆಗೆ ಶಾಹಿದಾ ಮಗುವಿನೊಂದಿಗೆ ದಾಟುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅತಿ ವೇಗದಿಂದ ಬಸ್‌ ನಿಲ್ದಾಣದೊಳಗೆ ಬಂದ ಸರಕಾರಿ ಬಸ್ ತಾಯಿ ಮಗುವಿಗೆ ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಸ್ಸುಗಳ ನಡುವಿನ ಪೈಪೋಟಿಯೇ ಈ ಘಟನೆಗೆ ಕಾರಣವೆಂದು ಸಾರ್ವಜನಿಕರು ಪ್ರತಿಭಟಿಸಿದ್ದು, ಬಸ್ಸು ನಿಲ್ದಾಣದ ಒಳಗೆ ಯಾವ ಬಸ್ಸುಗಳೂ ಪ್ರವೇಶಿಸದಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದು, ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Join Whatsapp
Exit mobile version