►ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಆಘಾತಕಾರಿ ಘಟನೆ
ಸಹರಾನ್ಪುರ (ಯುಪಿ): ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಮೇಲ್ವರ್ಗದ ದುಷ್ಕರ್ಮಿಗಳು ಆತನ ಹಣೆ ಮೇಲೆ ಆ್ಯಸಿಡ್ನಿಂದ ತ್ರಿಶೂಲ ಬಿಡಿಸಿ, ಚಿತ್ರಹಿಂಸೆ ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ನಡೆದಿದೆ.
ಇದಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿರುವ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾನೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಹರಾನ್ ಪುರ್ ಜಿಲ್ಲೆಯ ಆದೇಶ್ ಎಂಬ ದಲಿತ ಯುವಕನಿಗೆ ಹೋಳಿ ಹಬ್ಬದ ದಿನ ವಿಶಾಲ್ ರಾಣಾ ಎಂಬ ಮೇಲ್ಜಾತಿ ವ್ಯಕ್ತಿ ಫೋನ್ ಮಾಡಿ ಕರೆಯಿಸಿಕೊಂಡಿದ್ದು, ತಾನು ಮದ್ಯಪಾನ ಮಾಡುತ್ತಿದ್ದ ಗ್ಲಾಸ್ ತೊಳೆಯುವಂತೆ ಸೂಚಿಸಿದ್ದಾನೆ. ಈ ವೇಳೆ ಗ್ಲಾಸ್ ವಿಶಾಲ್ ರಾಣಾನ ಕಾಲಿನ ಮೇಲೆ ಬಿದ್ದಿದೆ. ಇದರಿಂದ ಆಕ್ರೋಶಗೊಂಡಿರುವ ಆತ ತನ್ನ ಸಹಚರರೊಂದಿಗೆ ಸೇರಿಕೊಂಡು ಆದೇಶ್ ಗೆ ಮಾರಣಾಂತಿಕವಾಗಿ ಥಳಿಸಿದ್ದಾನೆ
ಆತನ ಕೈ-ಕಾಲನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು, ಹಣೆಯ ಮೇಲೆ ಆ್ಯಸಿಡ್ ಎರಚಿದ್ದು, ತದನಂತರ ಆ್ಯಸಿಡ್ ಮೂಲಕ ತ್ರಿಶೂಲ ಬಿಡಿಸಿದ್ದಾರೆ. ಈ ವೇಳೆ ಹಲ್ಲೆ ಮಾಡದಂತೆ ಕೈಮುಗಿದು ಕೇಳಿಕೊಂಡರೂ ಯಾರು ಕರುಣೆ ತೋರಿಲ್ಲ. ಅವರ ಕೈಯಿಂದ ತಪ್ಪಿಸಿಕೊಂಡು ಬಂದಿರುವ ಆದೇಶ್ ಮನೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾನೆ.
ಇದರ ಬೆನ್ನಲ್ಲೇ ಪೊಲೀಸ್ ಠಾಣೆಗೆ ತೆರಳಿರುವ ಕುಟುಂಬಸ್ಥರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವ ಬೆನ್ನಲ್ಲೇ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಲಾಗಿದ್ದು, ದೂರು ವಾಪಸ್ ಪಡೆದುಕೊಳ್ಳದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾರೆಂದು ಸಂತ್ರಸ್ತ ಹೇಳಿಕೊಂಡಿದ್ದಾನೆ.
ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಎಸ್ ಎಸ್ ಪಿ ಆಕಾಶ್ ತೋಮರ್, ಹೋಳಿ ಹಬ್ಬದಿಂದ ಆದೇಶ್ ಮತ್ತು ವಿಶಾಲ್ ಒಟ್ಟಿಗೆ ಸೇರಿ ಮದ್ಯಪಾನ ಸೇವಿಸಿದ್ದಾರೆ. ಹಣದ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ಉಂಟಾಗಿದ್ದು, ಈ ವೇಳೆ ಆ್ಯಸಿಡ್ ಎರಚಲಾಗಿದೆ ಎಂದಿದ್ದಾರೆ.