Home ಟಾಪ್ ಸುದ್ದಿಗಳು ದಲಿತ ಮಹಿಳೆ ಸಿದ್ಧಪಡಿಸಿದ ಮಧ್ಯಾಹ್ನದ ಬಿಸಿಯೂಟ ಬಹಿಷ್ಕರಿಸಿದ ‘ಮೇಲ್ಜಾತಿ’ ವಿದ್ಯಾರ್ಥಿಗಳು

ದಲಿತ ಮಹಿಳೆ ಸಿದ್ಧಪಡಿಸಿದ ಮಧ್ಯಾಹ್ನದ ಬಿಸಿಯೂಟ ಬಹಿಷ್ಕರಿಸಿದ ‘ಮೇಲ್ಜಾತಿ’ ವಿದ್ಯಾರ್ಥಿಗಳು

ಉತ್ತರಾಖಂಡ: ಸಮರ್ಪಕ ಪೌಷ್ಟಿಕಾಂಶ ಹಾಗೂ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳ ಮಾಡುವ ಉದ್ದೇಶದಿಂದ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟವನ್ನು ಹಿಂದೂ ಧರ್ಮದ ‘ಮೇಲ್ಜಾತಿ’ ವಿದ್ಯಾರ್ಥಿಗಳು ಬಹಿಷ್ಕರಿಸಿದ ಘಟನೆ ಉತ್ತರಾಖಂಡದ ಚಂಪಾವತ್ ಜಿಲ್ಲೆಯಲ್ಲಿ ನಡೆದಿದೆ.

ದಲಿತ ಸಮುದಾಯಕ್ಕೆ ಸೇರಿದ ಮಹಿಳೆಯು ಬಿಸಿಯೂಟವನ್ನು ಸಿದ್ಧಪಡಿಸಿದ್ದಾಳೆ ಎಂಬ ಕಾರಣವೊಡ್ಡಿ ನಿರ್ದಿಷ್ಟ ಗುಂಪಿನ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಬಹಿಷ್ಕರಿಸಿದ್ದಾರೆ. ವಿದ್ಯಾರ್ಥಿಗಳ ಸಾಮಾಜಿಕ ತಾರತಮ್ಯ ಹಾಗೂ ಜಾತಿ ಪೂರ್ವಗ್ರಹದಿಂದಾಗಿ ಭಾರಿ ವಿವಾದ ಸೃಷ್ಟಿಯಾಗಿದೆ.

ಚಂಪಾವತ್ ಜಿಲ್ಲೆಯ ಜೌಲ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಯಾರಿಸಲು ಸುನಿತಾ ದೇವಿ ಎಂಬಾಕೆಯನ್ನು ಡಿಸೆಂಬರ್ 13ರಂದು ನೇಮಿಸಲಾಗಿತ್ತು. ಮೊದಲ ದಿನ ಎಲ್ಲಾ ವಿದ್ಯಾರ್ಥಿಗಳು ಬಿಸಿಯೂಟ ಸೇವಿಸಿದ್ದರು. ಆದರೆ ನಂತರದ ದಿನಗಳಲ್ಲಿ ನಿರ್ದಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳು ಬಿಸಿಯೂಟವನ್ನು ಬಹಿಷ್ಕರಿಸುತ್ತಿದ್ದಾರೆ. ಒಟ್ಟು 57 ವಿದ್ಯಾರ್ಥಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 16 ಮಕ್ಕಳಷ್ಟೇ ಸದ್ಯ ಬಿಸಿಯೂಟ ಸೇವಿಸುತ್ತಿದ್ದಾರೆ. ಉಳಿದವರು ಮನೆಯಿಂದಲೇ ಟಿಫಿನ್ ತರುತ್ತಿದ್ದಾರೆ ಎಂದು ಪ್ರಾಂಶುಪಾಲ ಪ್ರೇಮ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಶಾಲಾ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಎಲ್ಲರ ಒಪ್ಪಿಗೆ ಪಡೆದ ಬಳಿಕವಷ್ಟೇ ಸುನಿತಾ ದೇವಿಯವರನ್ನು ಅಡುಗೆ ಕೆಲಸಕ್ಕೆ ನೇಮಿಸಲಾಗಿತ್ತು ಎಂದು ಪ್ರೇಮ್ ಸಿಂಗ್ ಹೇಳಿದ್ದಾರೆ.

Join Whatsapp
Exit mobile version