ಚಿಕ್ಕಮಗಳೂರು: ‘ತಂತ್ರಜ್ಞಾನದ ಜೊತೆಗೆ ಹೆಜ್ಜೆ ಹಾಕುವುದು ಅನಿವಾರ್ಯ. ನಾವು ನಾಲ್ಕನೇ ಕೈಗಾರಿಕಾ ಕ್ರಾಂತಿ ಕಾಲಘಟ್ಟದಲ್ಲಿ ಇದ್ದೇವೆ. ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾಗಿ ‘ಅಪ್ಡೇಟ್’ ಆಗದಿದ್ದರೆ ಹಿಂದೆ ಬೀಳಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪದವಿ ಪಡೆದರೆ ಉದ್ಯೋಗ ಸಿಗುತ್ತದೆ ಎಂದುಕೊಳ್ಳುವಂತಿಲ್ಲ, ಉದ್ಯೋಗವು ಬಯಸುವ ಕೌಶಲಗಳನ್ನು ಕಲಿತುಕೊಳ್ಳಬೇಕು. ಹುದ್ದೆಗೆ ಪೂರಕ ಕೌಶಲಿಗಳು ಲಭ್ಯವಾಗದೆ ವಿಶ್ವದ ಶೇ 54 ರಷ್ಟು ಕಂಪೆನಿಗಳಲ್ಲಿ ಹಲವು ಉದ್ಯೋಗಗಳು ಖಾಲಿ ಇವೆ. 2021ರಇಂಡಿಯಾ ಸ್ಕಿಲ್ ವರದಿ ಪ್ರಕಾರ ಎಂಜಿನಿಯರಿಂಗ್ ಪೂರೈಸಿದವರ ಪೈಕಿ ಶೇ 80 ಮಂದಿ ಕೌಶಲ ಕೊರತೆಯಿಂದಾಗಿ ಉದ್ಯೋಗಕ್ಕೆ ಸಮರ್ಥರಾಗಿಲ್ಲ’ ಎಂದು ಹೇಳಿದರು.
‘ಕೌಶಲಾಭಿವೃದ್ಧಿ ತರಬೇತಿ ಕಾರ್ಯಗಾರಗಳಲ್ಲಿ ಭಾಗವಹಿಸಬೇಕು. ಕೌಶಲ ಕಲಿಯಬೇಕು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾಗಬಾರದು, ಭತ್ತ ಬೆಳೆಯುವ ಗದ್ದೆಗಳಾಗಬೇಕು. ಗುರಿ ಇಟ್ಟುಕೊಂಡು ಛಲ, ಪರಿಶ್ರಮದಿಂದ ಅದನ್ನು ತಲುಪಬೇಕು’ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಸಿಸಿಸಿಐ ಗೌರವ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ಎಫ್‌ಕೆಸಿಸಿಐ ನಿರ್ದೇಶಕಿ ಡಾ.ಮಧುರಾಣಿ ಗೌಡ, ಸಿಸಿಸಿಐ ಅಧ್ಯಕ್ಷ ಆರ್.ಎಂ.ಮಹೇಶ್ ಉಪಸ್ಥಿತರಿದ್ದರು.