ನವದೆಹಲಿ: ತ್ರಿಪುರಾ ಪೊಲೀಸರು ತಮ್ಮ ವಿರುದ್ಧ ದಾಖಲಿಸಿರುವ ಯುಎಪಿಎ ಕೇಸನ್ನು ರದ್ದುಪಡಿಸುವಂತೆ ಕೋರಿ ಪತ್ರಕರ್ತ ಶ್ಯಾಮ್ ಮೀರಾ ಸಿಂಗ್ ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ತ್ರಿಪುರಾ ಹೊತ್ತಿ ಉರಿಯುತ್ತಿದೆ ಎಂಬ ತಮ್ಮ ಟ್ವೀಟ್ ಗಾಗಿ ಬಿಜೆಪಿ ನೇತೃತ್ವದ ತ್ರಿಪುರಾ ಸರ್ಕಾರ ತಮ್ಮ ವಿರುದ್ಧ ಸುಳ್ಳು ಆರೋಪದಡಿ ಯುಎಪಿಎ ಪ್ರಕರಣ ದಾಖಲಿಸಿದೆ ಎಂದು ಅರ್ಜಿಯಲ್ಲಿ ಸಿಂಗ್ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದಾರೆ ಎಂಬ ಆರೋಪದಲ್ಲಿ ಸುಪ್ರೀಂ ಕೋರ್ಟ್ ವಕೀಲರಾದ ಇಹ್ತಿಶಾಮ್ ಹಶ್ಮಿ, ಅಮಿತ್ ಶ್ರೀವಾಸ್ತವ, ಅನ್ಸಾರ್ ಇಂದೋರಿ ಮತ್ತು ಮುಖೇಶ್ ಕುಮಾರ್ ಅವರಿಗೆ ಯುಎಪಿಎ ನೋಟಿಸ್ ಕಳುಹಿಸಲಾಗಿದೆ. ನಾಲ್ವರು ವಕೀಲರು ತಮ್ಮ ಸತ್ಯ ಶೋಧನಾ ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವ ಮೊದಲು ತ್ರಿಪುರಾದಲ್ಲಿ ನಡೆದ ಕೋಮುಗಲಭೆಯ ಬಗ್ಗೆ ಸತ್ಯಶೋಧನೆ ನಡೆಸಿದ್ದರು.
ತ್ರಿಪುರಾ ಪೊಲೀಸರು 102 ಸಾಮಾಜಿಕ ಮಾಧ್ಯಮ ಖಾತೆದಾರರ ವಿರುದ್ಧ ಯುಎಪಿಎ, ಕ್ರಿಮಿನಲ್ ಪಿತೂರಿ ಮತ್ತು ಫೋರ್ಜರಿ ಆರೋಪಗಳಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಮತ್ತು ಅಂತಹ ಖಾತೆಗಳನ್ನು ರದ್ದು ಮಾಡಲು ಮತ್ತು ಖಾತೆದಾರರ ಎಲ್ಲಾ ವಿವರಗಳನ್ನು ಒದಗಿಸುವಂತೆ ಟ್ವಿಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್ ನ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ.