Home ಟಾಪ್ ಸುದ್ದಿಗಳು ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಮಗಳನ್ನೇ ಜೀವಂತವಾಗಿ ಸುಟ್ಟ ಜಾತಿವಾದಿ ಉಗ್ರರು!

ಮುಸ್ಲಿಂ ವ್ಯಕ್ತಿಯನ್ನು ಪ್ರೀತಿಸುತ್ತಿದ್ದ ಮಗಳನ್ನೇ ಜೀವಂತವಾಗಿ ಸುಟ್ಟ ಜಾತಿವಾದಿ ಉಗ್ರರು!

ಗೋರಖ್ ಪುರ : ಉತ್ತರ ಪ್ರದೇಶದಲ್ಲಿ ಅಂತರ್ ಧರ್ಮೀಯ ವ್ಯಕ್ತಿಯೊಂದಿಗಿನ ಪ್ರೀತಿಗೆ ಆಕ್ಷೇಪಿಸಿ ಮನೆ ಮಗಳನ್ನೇ ಜೀವಂತ ಸುಟ್ಟು ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.

ಗೋರಖ್ ಪುರದ ಧಂಗಾಟಾ ಪೊಲೀಸ್ ಠಾಣಾ ವ್ಯಾಪ್ತಿಯ ಜಿಗಿನಾ ಗ್ರಾಮದಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮುಸ್ಲಿಂ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಕ್ಕೆ ಕೋಪಗೊಂಡಿದ್ದ ಯುವತಿಯ ಕುಟುಂಬಸ್ಥರು ಕೊಲೆ ಮಾಡಲು ಸುಪಾರಿ ಹಂತಕ ವರುಣ್ ತಿವಾರಿ ಎಂಬಾತನನ್ನು ನೇಮಿಸಿ 1.5 ಲಕ್ಷ ರೂ. ನೀಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯ ಶವ ಸುಟ್ಟ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ. ಪರಿಶೀಲನೆಯ ಬಳಿಕ ಮೃತದೇಹ ಗೋರಖ್ ಪುರದ ಬೆಲ್ಘಾಟ್ ಪ್ರದೇಶದ ರಂಜನಾ ಯಾದವ್ ಎಂದು ಗುರುತಿಸಲಾಯಿತು.

ಮೃತಳ ಸಂಬಂಧಿಕರಾದ ತಂದೆ ಸೀತಾರಾಮ್ ಯಾದವ್, ಅಣ್ಣ ಅಜಿತ್ ಯಾದವ್, ಮಾವ ಸತ್ಯಪ್ರಕಾಶ್ ಯಾದವ್ ಮತ್ತು ಸೀತಾರಾಮ್ ಯಾದವ್ ಎಂಬವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಲಾದ ಪೆಟ್ರೋಲ್ ಕಂಟೈನರ್ ಮತ್ತು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಗಳು ಮುಸ್ಲಿಂ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಳು. ಅವಳು ತನ್ನ ಪ್ರೇಮಿಯನ್ನು ಬಿಡಲು ಸಿದ್ಧವಿಲ್ಲದಿದ್ದಾಗ, ಆತ ತನ್ನ ಮಗ ಮತ್ತು ಅಳಿಯನೊಂದಿಗೆ ಸೇರಿ ಮಾಹುಲಿಯಿಂದ ಸುಪಾರಿ ಹಂತಕನನ್ನು ನೇಮಿಸಿರುವುದಾಗಿ ತಿಳಿಸಿದ್ದಾನೆ.

ಆರೋಪಿಗಳಲ್ಲಿ ಒಬ್ಬಾತ ಯುವತಿಯನ್ನು ಜಿಗಿನಾ ಗ್ರಾಮದ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆರೋಪಿಗಳು ಸೇರಿಕೊಂಡು, ಆಕೆ ಕೈ ಮತ್ತು ಬಾಯಿಯನ್ನು ಕಟ್ಟಿ, ನಂತರ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  

Join Whatsapp
Exit mobile version