ಲಖನೌ: ಹಿರಿಯ ವಕೀಲ ನಬಿ ಅಹ್ಮದ್ ಹತ್ಯೆ ಪ್ರಕರಣದಲ್ಲಿ ಬಂಧಿತ ಪೊಲೀಸ್ ಸಬ್ ಇನ್ಸ್’ಪೆಕ್ಟರ್ ಶೈಲೇಂದ್ರ ಸಿಂಗ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಉತ್ತರ ಪ್ರದೇಶದ ರಾಯ್ ಬರೇಲಿ ನ್ಯಾಯಾಲಯ ಆದೇಶ ನೀಡಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ರಶೀದ್ ಸಿದ್ದೀಕ್ ಎಂಬಾತನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
2015ರಲ್ಲಿ ಅಲಹಾಬಾದ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದಲ್ಲಿ ವಕೀಲ ನಬಿ ಅಹ್ಮದ್ ಅವರ ಕೊಲೆ ನಡೆದಿತ್ತು.
ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯ ಒಟ್ಟು 10 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಯಿತು. ಖುಲಾಸೆಗೊಂಡ ರಶೀದ್ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆ ಬಳಿಕ ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು ಎಂದು ಹಂಗಾಮಿ ಜಿಲ್ಲಾ ಸರ್ಕಾರಿ ವಕೀಲ ಅಜಯ್ ಮೌರ್ಯ ತಿಳಿಸಿದ್ದಾರೆ.
ಆರೋಪಿ ಶೈಲೇಂದ್ರನನ್ನು ರಾಯ್ ಬರೇಲಿ ಜೈಲಿನಲ್ಲಿರಿಸಲಾಗಿತ್ತು.
2015ರ ಮಾರ್ಚ್ 11 ರಂದು ಶೈಲೇಂದ್ರ ಅವರು ತನ್ನ ಸರ್ವೀಸ್ ಪಿಸ್ತೂಲ್ ಅನ್ನು ಹೊರ ತೆಗೆದು ನ್ಯಾಯಾಲಯದ ಆವರಣದಲ್ಲಿಯೇ ವಕೀಲ ನಬಿ ಅಹ್ಮದ್ ಅವರನ್ನು ಗುಂಡಿಕ್ಕಿ ಹತ್ಯೆ ನಡೆಸಿದ್ದರು.
ಹೈಕೋರ್ಟ್ ನಿರ್ದೇಶನದ ಮೇರೆಗೆ ಪ್ರಕರಣದ ವಿಚಾರಣೆಯನ್ನು ರಾಯ್ ಬರೇಲಿಗೆ ವರ್ಗಾಯಿಸಲಾಗಿತ್ತು.