ಲಕ್ನೋ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಜೊತೆ ಸೆಲ್ಫಿ ತೆಗೆದುಕೊಂಡ ಮಹಿಳಾ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ ಸರ್ಕಾರ ಆದೇಶಿಸಿದೆ ಎಂದು ವರದಿಯಾಗಿದೆ.
ಆಗ್ರಾದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಸ್ವಚ್ಛತಾ ಕೆಲಸಗಾರನ ಕುಟುಂಬವನ್ನು ಭೇಟಿ ಮಾಡಲು ಆಗಮಿಸಿದ ಪ್ರಿಯಾಂಕಾ ಗಾಂಧಿಯನ್ನು ಲಕ್ನೋ-ಆಗ್ರಾ ಎಕ್ಸ್ಪ್ರೆಸ್ ಹೆದ್ದಾರಿಯ ಟೋಲ್ ಪ್ಲಾಜಾದಲ್ಲಿ ಉತ್ತರಪ್ರದೇಶ ಪೊಲೀಸರು ತಡೆದಿದ್ದರು. ಈ ವೇಳೆ ಕೆಲವು ಮಹಿಳಾ ಪೊಲೀಸರು ಪ್ರಿಯಾಂಕಾ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು.
ಮಹಿಳಾ ಪೊಲೀಸರು ಪ್ರಿಯಾಂಕಾ ಜೊತೆ ಸೆಲ್ಫಿ ತೆಗೆದುಕೊಂಡ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ವತಃ ಪ್ರಿಯಾಂಕಾ ಚಿತ್ರವನ್ನು ಟ್ವೀಟ್ ಮಾಡಿದ್ದರು. ಈ ಕುರಿತು ಲಕ್ನೋ ಪೊಲೀಸ್ ಆಯುಕ್ತ ಡಿ.ಕೆ. ಠಾಕೂರ್ ಸೆಲ್ಫಿ ತೆಗೆದುಕೊಂಡ ಮಹಿಳಾ ಪೊಲೀಸರ ವಿರುದ್ಧ ಆದೇಶ ನೀಡಿದ್ದಾರೆ ಎಂದು ವರದಿಯಾಗಿದೆ.