► ನಿಮ್ಮ ಮಕ್ಕಳಾಗಿದ್ದರೆ, ಇದೇ ರೀತಿ ನಡೆಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದ ವರುಣ್ ಗಾಂಧಿ !
ಲಕ್ನೋ : ಉತ್ತರ ಪ್ರದೇಶದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದಾಗಿ ಆರೋಪಿಸಿ ಪ್ರತಿಭಟಿಸುತ್ತಿದ್ದ ನೂರಾರು ಯುವಕರನ್ನು ಯೋಗಿ ಆದಿತ್ಯ ನಾಥರ ಪೊಲೀಸರು ಹಿಂಸಾತ್ಮಕವಾಗಿ ಥಳಿಸಿದ್ದಾರೆ. 2019ರಲ್ಲಿ ನಡೆದ ಸಹಾಯಕ ಶಿಕ್ಷಕರ ನೇಮಕಾತಿ ಮತ್ತು ಮೀಸಲಾತಿಯು ಸರಿಯಾಗಿ ಅನ್ವಯವಾಗಿಲ್ಲ ಎಂದು ಆರೋಪಿಸಿ ಪ್ರತಿಭಟಿಸುತ್ತಿದ್ದ ಯುವಜನರ ಮೇಲೆ ಪೊಲೀಸರು ಅಮಾನವೀಯವಾಗಿ ಥಳಿಸಿದ್ದಾರೆ.
ಉತ್ತರ ಪ್ರದೇಶ ಪೊಲೀಸರು ಯುವಕರಿಗೆ ಚಿತ್ರಹಿಂಸೆ ನೀಡುತ್ತಿರುವ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಜನಾಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಎರಡು ವರ್ಷಗಳಿಂದಲೂ ದಲಿತ ಮತ್ತು ಒಬಿಸಿ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡದೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯುತ್ತಿತ್ತು. ಅದರಂತೆ ಮುಖ್ಯಮಂತ್ರಿ ಮನೆಯೆಡೆಗೆ ಶನಿವಾರ ಸಂಜೆ ಪಂಜಿನ ಮೆರವಣಿಗೆ ಹೊರಟಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಘಟನೆಯ ಬಗ್ಗೆ ಟ್ವೀಟ್ ಮೂಲಕ ಹಂಚಿಕೊಂಡಿರುವ ಬಿಜೆಪಿ ಸಂಸದ ವರುಣ್ ಗಾಂಧಿ, ‘ಈ ಮಕ್ಕಳೂ ಸಹ ತಾಯಿ ಭಾರತಾಂಬೆಯ ಮಕ್ಕಳೆ. ಆದರೆ ಅವರ ನೋವನ್ನು, ಅವರ ಮಾತನ್ನು ಕೇಳಲು ಯಾರೂ ಸಿದ್ಧರಿಲ್ಲ. ಅವರ ಮೇಲೆ ಈ ಬರ್ಬರ ಲಾಠಿ ಚಾರ್ಜ್ ನಡೆಯುತ್ತಿದೆ. ನಿಮ್ಮ ಎದೆಯ ಮೇಲೆ ಕೈಯಿಟ್ಟು ಯೋಚಿಸಿ, ಇವರು ನಿಮ್ಮ ಮಕ್ಕಳಾಗಿದ್ದರೆ, ಆಗಲೂ ಇದೇ ರೀತಿ ನಡೆಸಿಕೊಳ್ಳುತ್ತಿದ್ದೀರಾ? ನಿಮ್ಮಲ್ಲಿ ಖಾಲಿ ಹುದ್ದೆಗಳು ಮತ್ತು ಅರ್ಹ ಅಭ್ಯರ್ಥಿಗಳು ಇದ್ದಾರೆ, ಆದ್ದರಿಂದ ಏಕೆ ನೇಮಕಾತಿ ಮಾಡಬಾರದು?’ ಎಂದು ಸ್ವಪಕ್ಷೀಯರ ವಿರುದ್ಧವೇ ಗುಡುಗಿದ್ದಾರೆ.