ಲಕ್ನೋ: ಉತ್ತರ ಪ್ರದೇಶದ ಸರ್ಕಾರವು ಕೋವಿಡ್‌ನ ಎರಡನೇ ಅಲೆಯನ್ನು ಚೆನ್ನಾಗಿ ನಿಭಾಯಿಸಿದೆ ಎಂದು ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದು, ಪ್ರಧಾನಿ ‘ಗುಡ್ ಸರ್ಟಿಫಿಕೇಟ್’ ನೀಡುವ ಮೂಲಕ ಉತ್ತರಪ್ರದೇಶದ ಕೋವಿಡ್ ವೈಫಲ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ವಿಧಾನಸಭಾ ಚುನಾವಣೆಗೂ ಮುನ್ನ ಉತ್ತರಪ್ರದೇಶದಲ್ಲಿ ಒಂದು ವಾರದ ಪ್ರಚಾರ ನಡೆಸಲು ಆಗಮಿಸಿದ ಪ್ರಿಯಾಂಕಾ, ರಾಜ್ಯ ಸರ್ಕಾರದ ವಿರುದ್ಧ ಗಾಂಧಿ ಸ್ಮೃತಿಯಲ್ಲಿ ಮೌನ ಧರಣಿ ನಡೆಸಿದ್ದಾರೆ. ಕೋವಿಡ್‌ನ ಎರಡನೇ ಅಲೆಯ ಸಮಯದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಜನರ ಬಳಿ ಅತ್ಯಂತ ಕ್ರೂರ ಮತ್ತು ನಿರ್ಲಕ್ಷ್ಯ ಮನೋಭಾವದಿಂದ ವರ್ತಿಸಿದೆ. ಈ ಸಮಯದಲ್ಲಿ ರಾಜ್ಯದ ಜನತೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಮತ್ತು ಕೋವಿಡ್ ಸೋಂಕನ್ನು ಎದುರಿಸುವಲ್ಲಿ ಯೋಗಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರಿಯಾಂಕಾ ಹೇಳಿದರು.