ಉತ್ತರ ಪ್ರದೇಶ | ‘ಲವ್ ಜಿಹಾದ್’ ಕಾನೂನಿನ ಮಸೂದೆ ಅಂತಿಮ | 10 ವರ್ಷ ಜೈಲು

Prasthutha|

ಲಖನೌ : ಕಾನೂನು ಬಾಹಿರ ಮತಾಂತರ ಮತ್ತು ಕೇವಲ ಹುಡುಗಿಯ ಧರ್ಮ ಬದಲಾವಣೆಯ ಉದ್ದೇಶದಿಂದಾದ ಅಂತರ್ ಧರ್ಮೀಯ ಮದುವೆಯಾದ ಪ್ರಕರಣಗಳನ್ನು ನಿರ್ವಹಿಸಲು ರಚಿಸಲಾದ ನೂತನ ಕರಡು ಮಸೂದೆಯೊಂದಕ್ಕೆ ಉತ್ತರ ಪ್ರದೇಶ ಸರಕಾರ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ. ಪ್ರಸ್ತಾಪಿತ ಮಸೂದೆಯಲ್ಲಿ, ತಪ್ಪಿತಸ್ಥರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಹುಡುಗಿಯ ಧರ್ಮ ಬದಲಾಯಿಸುವ ಉದ್ದೇಶದಿಂದ ಮದುವೆಯಾಗಿದ್ದರೆ, ಅಂತಹ ಮದುವೆಯನ್ನು ರದ್ದುಗೊಳಿಸಬಹುದಾದ ಅವಕಾಶವೂ ಈ ಮಸೂದೆಯಲ್ಲಿದೆ. ಉತ್ತರ ಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ತಡೆ ಮಸೂದೆ ಎಂದು ಪ್ರಸ್ತಾಪಿತ ಮಸೂದೆಯನ್ನು ಗುರುತಿಸಲಾಗಿದೆ.

- Advertisement -

ಪ್ರಸ್ತಾಪಿತ ಮಸೂದೆಯ ನಿಯಮಗಳನ್ನು ಉಲ್ಲಂಘಿಸಿ ಯಾರನ್ನಾದರೂ ಮತಾಂತರ ಮಾಡಿದರೆ, ಮತಾಂತರ ಮಾಡಿಸಿದ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಸರಕಾರದ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. ಮತಾಂತರ ಬಲವಂತವಾಗಿ, ದೌರ್ಜನ್ಯದಿಂದ ಅಥವಾ ಮೊಸದಿಂದ ಮಾಡಿದ್ದರೆ, ಅಂತಹ ಅಪರಾಧವು ಜಾಮೀನುರಹಿತವಾಗಿರುತ್ತದೆ ಎಂದು ಹೇಳಲಾಗಿದೆ.

ಸಚಿವ ಸಂಪುಟ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. 100ಕ್ಕೂ ಹೆಚ್ಚು ಬಲವಂತದ ಮತಾಂತರ ಪ್ರಕರಣಗಳು ಬೆಳಕಿಗೆ ಬಂದಿವೆ. ಸುಳ್ಳು, ಅಪ್ರಾಮಾಣಿಕತೆ, ವಂಚನೆ, ಬಲವಂತದಿಂದ ಧಾರ್ಮಿಕ ಮತಾಂತರಗಳನ್ನು ಮಾಡಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿ ಕಾನೂನು ತರುವ ಅಗತ್ಯವಿತ್ತು ಎಂದು ಉತ್ತರ ಪ್ರದೇಶ ಸಚಿವ, ಸರಕಾರದ ವಕ್ತಾರ ಸಿದ್ಧಾರ್ಥನಾಥ್ ಸಿಂಗ್ ಹೇಳಿದ್ದಾರೆ.

ಅಂತರ್ ಧರ್ಮೀಯ ವಿವಾಹಗಳನ್ನು ‘ಲವ್ ಜಿಹಾದ್’ ಎಂದು ಬಣ್ಣಿಸುವ ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಇಲ್ಲದ ಕಟ್ಟುಕತೆಗಳನ್ನು ಹೆಣೆದು, ಈ ಬಗ್ಗೆ ಹಲವು ವರ್ಷಗಳಿಂದ ಜನಾಭಿಪ್ರಾಯ ಮೂಡಿಸಿಕೊಂಡು ಬಂದಿವೆ. ಬಿಜೆಪಿ ವಿಚಾರಧಾರೆಯನ್ನೇ ಜೀವಾಳವಾಗಿಸಿಕೊಂಡ ಮುಖ್ಯವಾಹಿನಿಯ ಮಾಧ್ಯಮಗಳೂ ಈ ಬಗ್ಗೆ ಕಪೋಲಕಲ್ಪಿತ ವರದಿಗಳನ್ನು ಸೃಷ್ಟಿಸುತ್ತಾ, ಬಿಜೆಪಿ ಸಿದ್ಧಾಂತವನ್ನು ಬಲವಾಗಿ ನೆರೆಯೂರಲು ಸಹಕರಿಸಿಕೊಂಡು ಬಂದಿವೆ. ಇದೀಗ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸಲು ಮುಂದಾಗಿವೆ.  

- Advertisement -