ಲಖನೌ: 2020 ರ ಫೆಬ್ರವರಿಯಲ್ಲಿ ಅಲಿಘರ್ ಎಂಬಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯ ವೇಳೆ ಮುಹಮ್ಮದ್ ತಾರಿಕ್ ಮುನವ್ವರ್ ಎಂಬವರ ಹತ್ಯೆಯಲ್ಲಿ ಭಾಗಿಯಾದ ಬಿಜೆಪಿ ಯುವ ಮೋರ್ಚಾ ಮಾಜಿ ಮುಖಂಡ ವಿನಯ್ ವರ್ಷಿ ಸೇರಿದಂತೆ ಮೂವರು ಸಂಘಪರಿವಾರದ ಮುಖಂಡರನ್ನು ಸ್ಥಳೀಯ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಸಿಎಎ ವಿರುದ್ಧದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, 22 ವರ್ಷದ ಮುಸ್ಲಿಮ್ ಯುವಕ ತಾರಿಕ್ ಎಂಬವರು ತನ್ನ ಮನೆಯ ಟೆರೇಸ್ ಮೇಲೆ ನಿಂತಿದ್ದ ವೇಳೆ ಸಂಘಪರಿವಾರದ ಮುಖಂಡರು ಪೊಲೀಸರೊಂದಿಗೆ ಸೇರಿಕೊಂಡು ಗುಂಡು ಹಾರಿಸಿದ್ದರು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ತಾರಿಕ್ ಅವರನ್ನು ತಕ್ಷಣ ಅಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಈ ಮಧ್ಯೆ ತಾರಿಕ್ ಮೇಲೆ ವಿನಯ್ ಮತ್ತು ಇತರರು ಗುಂಡು ಹಾರಿಸಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದು, ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರಾದ ವಿನಯ್ ಸೇರಿದಂತೆ ಮೂವರು ಕಳೆದ 2 ವರ್ಷಗಳಿಂದ ಜೈಲಿನಲ್ಲಿದ್ದರು. ಕೃತ್ಯಕ್ಕೆ ಬಳಸಿದ ಮಾರಕಾಯುಧಗಳು ವಿನಯ್ ಹೆಸರಿನಲ್ಲಿ ನೋಂದಾಯಿಸಲಾಗಿದ್ದು, ಅದನ್ನು ಆತನ ನಿವಾಸದಿಂದ ಪೊಲೀಸರು ವಶಪಡಿಸಿಕೊಂಡಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಸಾಕ್ಷ್ಯಾಧಾರದ ಕೊರತೆಯಿಂದ ಈ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.