Home ಟಾಪ್ ಸುದ್ದಿಗಳು ಏಕರೂಪ ನಾಗರಿಕ ಸಂಹಿತೆ: ರಾಜ್ಯಗಳ ಸಮಿತಿ ರಚನೆಯನ್ನು ಪ್ರಶ್ನಿಸಿದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ

ಏಕರೂಪ ನಾಗರಿಕ ಸಂಹಿತೆ: ರಾಜ್ಯಗಳ ಸಮಿತಿ ರಚನೆಯನ್ನು ಪ್ರಶ್ನಿಸಿದ್ದ ಪಿಐಎಲ್ ತಿರಸ್ಕರಿಸಿದ ಸುಪ್ರೀಂ

ನವದೆಹಲಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುವುದಕ್ಕಾಗಿ ಸಮಿತಿ ರಚಿಸುವ ಉತ್ತರಾಖಂಡ ಮತ್ತು ಗುಜರಾತ್ ಸರ್ಕಾರಗಳ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

ಅರ್ಜಿಯು ವಿಚಾರಣಾರ್ಹ ಅಂಶಗಳನ್ನು ಹೊಂದಿಲ್ಲ. ಇಂತಹ ಸಮಿತಿ ರಚನೆಯನ್ನು ಪ್ರಶ್ನಿಸುವುದು ನ್ಯಾಯಾಲಯದ ವ್ಯಾಪ್ತಿಯ ಹೊರಗಿದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಹೇಳಿತು.

“ಸಂಹಿತೆ ರೂಪಿಸುವುದಕ್ಕಾಗಿ ಗುಜರಾತ್ ಮತ್ತು ಉತ್ತರಾಖಂಡ ಸಮಿತಿಗಳನ್ನು ರಚಿಸಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಶಾಸಕಾಂಗವು ಅನುಮತಿಸುವಷ್ಟು ರಾಜ್ಯಗಳ ಕಾರ್ಯಾಂಗದ ಅಧಿಕಾರವು ವಿಸ್ತರಿಸುತ್ತದೆ ಎಂಬುದನ್ನು ಸಂವಿಧಾನದ 162ನೇ ವಿಧಿ ಸೂಚಿಸುತ್ತದೆ. ಸಮಿತಿ ರಚನೆಯನ್ನು ಪ್ರಶ್ನಿಸುವುದು ನ್ಯಾಯಾಲಯದ ಅಧಿಕಾರವ್ಯಾಪ್ತಿಯ ಹೊರಗಿದೆ” ಎಂದು ನ್ಯಾಯಾಲಯ ಹೇಳಿತು.

ಸಂವಿಧಾನದ 162ನೇ ವಿಧಿ ಕಾರ್ಯಾಂಗಕ್ಕೆ ಅಧಿಕಾರ ನೀಡುವುದರಿಂದ ರಾಜ್ಯಗಳು ಸಮಿತಿ ರಚಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಪೀಠ ಹೇಳಿದೆ.

ಗುಜರಾತ್‌ ರಾಜ್ಯ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಮುಂದಾಗಿದೆ ಎಂದು ಕಳೆದ ವರ್ಷ ಅಕ್ಟೋಬರ್’ನಲ್ಲಿ ಗುಜರಾತ್ ಸರ್ಕಾರದ ಗೃಹ ಸಚಿವ ಹರ್ಷ ಸಾಂಘ್ವಿ ಹೇಳಿದ್ದರು. ಇದಕ್ಕೂ ಮೊದಲು ಮೇ 2022ರಲ್ಲಿ,  ಆಯಾ ಸಮುದಾಯಗಳ ವೈಯಕ್ತಿಕ ಕಾನೂನುಗಳನ್ನು ಪರಿಶೀಲಿಸಲು ಮತ್ತು ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್‌ ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿಯನ್ನು ಉತ್ತರಾಖಂಡ ಸರ್ಕಾರ ರಚಿಸಿತ್ತು.

ದೇಶದ ಎಲ್ಲಾ ಸಮುದಾಯಗಳಿಗೆ ವಿಚ್ಛೇದನ, ದತ್ತು ಹಾಗೂ ಪಾಲನೆಗಾಗಿ ಏಕರೂಪದ ಕಾರ್ಯವಿಧಾನ ಜಾರಿಗೆ ತರಲು ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್’ನಲ್ಲಿ ಸಲ್ಲಿಸಿರುವ ಅರ್ಜಿಗಳು ಬಾಕಿ ಇದ್ದು ವಿಚಾರಣೆಯೊಂದರ ವೇಳೆ ಕೇಂದ್ರ ಸರ್ಕಾರ ಈ ಮನವಿಗೆ ವಿರೋಧ ವ್ಯಕ್ತಪಡಿಸಿತ್ತು. ಏಕರೂಪ ಕಾನೂನು ಜಾರಿಗೊಳಿಸುವುದು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ ಎಂದು ಅದು ಹೇಳಿತ್ತು.

(ಕೃಪೆ: ಬಾರ್&ಬೆಂಚ್)

Join Whatsapp
Exit mobile version