ರಾಯ್ ಪುರ: ದಸರಾ ಆಚರಣೆಯ ಪ್ರಯುಕ್ತ ನಡೆಯುವ ಪ್ರತಿಕೃತಿ ದಹನದ ಸಂದರ್ಭದಲ್ಲಿ 10 ತಲೆಯ ರಾವಣನ ಪ್ರತಿಕೃತಿ ಉರಿಯದ ಹಿನ್ನೆಲೆಯಲ್ಲಿ ಪಾಲಿಕೆಯ ಗುಮಾಸ್ತನನ್ನು ಕರ್ತವ್ಯದಿಂದ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ ವಿಚಿತ್ರ ಘಟನೆ ಛತ್ತೀಸ್’ಗಡದ ಧಮ್ತಾರಿಯಲ್ಲಿ ನಡೆದಿದೆ. ಅಲ್ಲದೆ ಈ ಸಂಬಂಧ ನಾಲ್ವರು ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಹೇಳಲಾಗಿದೆ.
ಅಕ್ಟೋಬರ್ 5ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ರಾವಣನ ಪ್ರತಿಕೃತಿ ದಹಿಸುವ ಸಂದರ್ಭದಲ್ಲಿ, ರಾಕ್ಷಸ ರಾಜ ರಾವಣನ ತಲೆಗಳು ಉರಿಯದೇ ಹಾಗೇ ಬಾಕಿಯಾಗಿದ್ದು, ದೇಹವು ಬೂದಿಯಾಗಿರುವುದು ವೀಡಿಯೋದಲ್ಲಿ ಸೆರೆಯಾಗಿತ್ತು.
ದಸರಾ ಅಥವಾ ವಿಜಯದಶಮಿಯ ವಾರ್ಷಿಕ ದುರ್ಗಾಪೂಜಾ ಕಾರ್ಯಕ್ರಮವು ಅಂತ್ಯವನ್ನು ಸೂಚಿಸುತ್ತದೆ. ದುಷ್ಟಶಕ್ತಿಗಳ ವಿರುದ್ಧ ಒಳ್ಳೆತನ ಜಯಶಾಲಿಯಾದ ಸಂಕೇತವಾಗಿ ರಾವಣನ ಪ್ರತಿಕೃತಿಯನ್ನು ದೇಶದೆಲ್ಲೆಡೆ ಸುಡಲಾಗುತ್ತದೆ. ಈ ನಿಟ್ಟಿನಲ್ಲಿ ಧಮ್ತಾರಿ ಸ್ತಳೀಯಾಡಳಿತದಿಂದ ರಾವಣನ ಪ್ರತಿಕೃತಿಯನ್ನು ಸುಡುವ ಕಾರ್ಯಕ್ರಮವನ್ನು ವ್ಯವಸ್ಥೆಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಧ್ಯೆ ರಾವಣನ ಮೂರ್ತಿ ತಯಾರಿಸುವ ವೇಳೆ ನಿರ್ಲಕ್ಷ್ಯ ವಹಿಸಿದ ಆರೋಪದಲ್ಲಿ ಗುಮಾಸ್ತ ರಾಜೇಂದ್ರ ಯಾದವ್ ಅವರನ್ನು ಸಸ್ಪೆಂಡ್ ಮಾಡಿ ಧಮ್ತಾರಿ ಮುನ್ಸಿಪಾಲ್ ಕಾರ್ಪೋರೇಷನ್ ಆದೇಶ ನೀಡಿದೆ.
ಅಲ್ಲದೆ ಪಾಲಿಕೆಯ ಸಹಾಯಕ ಎಂಜಿನಿಯರ್ ವಿಜಯ್ ಮೆಹ್ರಾ ಮತ್ತು ಉಪ ಎಂಜಿನಿಯರಿಂಗ್ ಆದ ಲೋಮಸ್ ದೇವಾಂಗನ್, ಕಮಲೇಶ್ ಠಾಕೂರ್ ಮತ್ತು ಕಮತಾ ನಾಗೇಂದ್ರ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.