ನ್ಯೂಯಾರ್ಕ್: ಅಂತಾರಾಷ್ಟ್ರೀಯ ಸಮುದಾಯ ಆರ್ಥಿಕ ನೆರವನ್ನು ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನವು ತೀವ್ರ ಮಟ್ಟದ ಅಪಾಯವನ್ನು ಎದುರಿಸಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.
.
ಯುನೈಟೆಡ್ ನೇಷನ್ಸ್ ಡೆವಲಪ್ ಮೆಂಟ್ ಪ್ರೋಗ್ರಾಂ (ಯು.ಎನ್.ಡಿ.ಪಿ) ಬಿಡುಗಡೆ ಮಾಡಿರುವ ವರದಿಯಲ್ಲಿ ದೇಶದ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಬಗೆಹರಿಸದ ಹೊರತು ಸುಮಾರು 97 ಶೇಕಡಾ ಜನಸಂಖ್ಯೆ ಬಡತನ ರೇಖೆಗಿಂತ ಕೆಳಗೆ ಉಳಿಯಲಿದೆ ಎಂಬ ಆಘಾತಕಾರಿ ಅಂಶವನ್ನು ಹೊರಹಾಕಿದೆ.
ಅಫ್ಘಾನಿಸ್ತಾನದ ಕೇಂದ್ರ ಬ್ಯಾಂಕಿನ ಸುಮಾರು 10 ಬಿಲಿಯನ್ ಡಾಲರ್ ಗಳನ್ನು ಪ್ರಸ್ತುತ ವಿದೇಶದಲ್ಲಿ ಸ್ಥಗಿತಗೊಳಿಸಲಾಗಿದೆ ಮತ್ತು ನೂತನ ಆಡಳಿತದ ಮೇಲೆ ಹಿಡಿತ ಸಾಧಿಸಲು ಈ ನಡೆಯನ್ನು ಪ್ರದರ್ಶಿಸಿದೆ ಎಂದು ಹೇಳಲಾಗುತ್ತಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿಯು ನೂತನ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ತುರ್ತು ಸೇವೆಗಳಿಗಾಗಿ ಮೀಸಲಿರಿಸಿದ್ದ 440 ಮಿಲಿಯನ್ ಡಾಲರ್ ಅಫ್ಘಾನ್ ತಲುಪದಂತೆ ನಿರ್ಬಂಧ ಹೇರಿದೆ. ಈ ಮಧ್ಯೆ ರಷ್ಯಾ ಮತ್ತು ಚೀನಾ ಅಫ್ಘಾನಿಸ್ತಾನದಲ್ಲಿ ತಲೆದೋರಿರುವ ಬಿಕ್ಕಟ್ಟನ್ನು ನಿವಾರಿಸುವ ನಿಟ್ಟಿನಲ್ಲಿ ಆರ್ಥಿಕ ನೆರವನ್ನು ಒದಗಿಸಲು ಸಿದ್ದವಾಗುತ್ತಿದೆ.
ಈ ಎಲ್ಲಾ ಸಂಪತ್ತು ಅಫ್ಘಾನಿಸ್ತಾನಕ್ಕೆ ಸೇರಿದ್ದು ಮತ್ತು ರಾಷ್ಟ್ರದ ಅಭಿವೃದ್ದಿಗೆ ಬಳಕೆಯಾಗಬೇಕು ಎಂದು ಚೀನಾದ ವಿಶ್ವಸಂಸ್ಥೆಯ ಉಪ ರಾಯಭಾರಿ ಗೆಂಗ್ ಶುವಾಂಗ್ ಹೇಳಿದರು.