ವಿಶ್ವಸಂಸ್ಥೆ: ಭಾರತದಲ್ಲಿ ಪ್ರವಾದಿ ಮುಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಭಾರತದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ, ಎಲ್ಲ ರೀತಿಯ ಹಿಂಸಾಚಾರಗಳು ವಿಶೇಷವಾಗಿ ಧಾರ್ಮಿಕ ಭಿನ್ನತೆ ಮತ್ತು ಹಗೆತನಕ್ಕೆ ಸಂಬಂಧಿಸಿದ ಹಿಂಸಾಚಾರಗಳು ಅಂತ್ಯವಾಗಬೇಕು ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರ್ರಸ್ ಅವರ ವಕ್ತಾರ ಸ್ಟೀಫನ್ ಡುಜಾರ್ರಿಕ್ ಹೇಳಿದ್ದಾರೆ.
ಪ್ರವಾದಿ ಮುಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ಬಳಿಕ ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರಗಳ ಕುರಿತು ವಿಶ್ವಸಂಸ್ಥೆಯ ನಿಲುವು ಏನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಈಗಾಗಲೇ ತಿಳಿಸಿದಂತೆ ಧರ್ಮದ ಬಗ್ಗೆ ನಮಗೆ ಗೌರವವಿದೆ. ಯಾವುದೇ ರೀತಿಯ ದ್ವೇಷವನ್ನು ವಿರೋಧಿಸುತ್ತೇವೆ. ಎಲ್ಲ ರೀತಿಯ ಹಿಂಸಾಚಾರಗಳು ನಿಲ್ಲಬೇಕು. ವಿಶೇಷವಾಗಿ ಧಾರ್ಮಿಕತೆಗೆ ಸಂಬಂಧಿಸಿದ್ದು ಎಂದು ತಿಳಿಸಿದರು.