Home ಜಾಲತಾಣದಿಂದ ಹಜ್ ಯಾತ್ರಿಕರ ಆರೈಕೆ ಮಾಡಿದ ಸ್ವಯಂ ಸೇವಕರಿಗೆ ಉಮ್ರಾ ಪ್ರವಾಸ: ಜಮೀರ್ ಅಹ್ಮದ್

ಹಜ್ ಯಾತ್ರಿಕರ ಆರೈಕೆ ಮಾಡಿದ ಸ್ವಯಂ ಸೇವಕರಿಗೆ ಉಮ್ರಾ ಪ್ರವಾಸ: ಜಮೀರ್ ಅಹ್ಮದ್

ಬೆಂಗಳೂರು: ಹಜ್ ಯಾತ್ರಿಗಳ ಆರೈಕೆ ಮಾಡಿದ ಸ್ವಯಂ ಸೇವಕರನ್ನು ವೈಯಕ್ತಿಕ ವೆಚ್ಚದಲ್ಲಿ ಪವಿತ್ರ ಉಮ್ರಾ ಪ್ರವಾಸಕ್ಕೆ ಕಳುಹಿಸುವುದಾಗಿ ವಸತಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ಶುಕ್ರವಾರ ಹಜ್ ಭವನಕ್ಕೆ ಭೇಟಿ ನೀಡಿ ಯಾತ್ರಿಗಳೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಯಾತ್ರಿಗಳಿಗೆ ಶುಭ ಕೋರಿ ಮಾತನಾಡಿದ ಅವರು, ಕಳೆದ ಬಾರಿ 170 ಸ್ವಯಂ ಸೇವಕರನ್ನು ಉಮ್ರಾ ಪ್ರವಾಸಕ್ಕೆ ಕಳುಹಿಸಲಾಗಿತ್ತು. ಉಳಿದ ಸುಮಾರು 100 ಸ್ವಯಂ ಸೇವಕರನ್ನು ಈ ಬಾರಿ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ಹಜ್ ಯಾತ್ರಿಗಳ ಆರೈಕೆ ನಿಜಕ್ಕೂ ಪುಣ್ಯದ ಕೆಲಸವಾಗಿದೆ. ಹದಿನೈದು ದಿನಗಳ ಕಾಲ ಯಾತ್ರಿಗಳು ಹಾಗೂ ಅವರ ಕುಟುಂಬದವರ ಯೋಗಕ್ಷೇಮ ನೋಡಿಕೊಳ್ಳುವ ಮೂಲಕ ನೀವು ಅಲ್ಲಾಹನ ಕೃಪೆಗೆ ಪಾತ್ರರಾಗಿದ್ದೀರಿ. ಈ ಬಾರಿಯ ಹಜ್ ಯಾತ್ರೆ ವ್ಯವಸ್ಥೆ ಒಂದು ರೀತಿಯ ವಿಶಿಷ್ಟ ಅನುಭವ ನೀಡಿದೆ. ಅಚ್ಚುಕಟ್ಟಾಗಿ ನೆರವೇರಲು ಸ್ವಯಂ ಸೇವಕರ ಶ್ರಮ ಹೆಚ್ಚಾಗಿದೆ. ಯಾತ್ರಿಕರ ಆಶೀರ್ವಾದ ಸಿಕ್ಕಿದ್ದು ನನ್ನ ಪುಣ್ಯ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಯಾತ್ರಿಕರೊಂದಿಗೆ ಸಂವಾದ ನಡೆಸಿ ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಸ್ವಯಂ ಸೇವಕರ ಕುಶಲೋಪರಿ ವಿಚಾರಿಸಿದರು. ಯಾತ್ರಿಕರು ಹಾಗೂ ಅವರ ಕುಟುಂಬಸ್ಥರು ನಿತ್ಯ ಊಟ ತಿಂಡಿ ಸೇವಿಸುವ ಸಭಾಂಗಣಕ್ಕೆ ಭೇಟಿ ನೀಡಿ ಆತಿಥ್ಯದ ಬಗ್ಗೆ ವಿಚಾರಿಸಿ, ಅಡುಗೆ ಕೋಣೆ ಸ್ವಚ್ಛವಾಗಿರಿಸುವಂತೆ ಸೂಚಿಸಿದರು.

ಹಜ್ ಖಾತೆ ಸಚಿವ ರಹೀಮ್ ಖಾನ್, ಹಜ್ ಕಮಿಟಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸರ್ಫ್ರಾಜ್ ಖಾನ್, ಹಜ್ ಕಮಿಟಿ ಅಧ್ಯಕ್ಷ ರೌಫ್ ಕಚೇರಿ ವಾಲಾ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Join Whatsapp
Exit mobile version