Home ಟಾಪ್ ಸುದ್ದಿಗಳು ಕಳ್ಳತನ ಒಪ್ಪಿಕೊಳ್ಳುವಂತೆ ಪೊಲೀಸರಿಂದ ಚಿತ್ರಹಿಂಸೆ; ಮಹಿಳೆಯ ನೋವಿನ ಮಾತುಗಳ ವೀಡಿಯೋ ವೈರಲ್

ಕಳ್ಳತನ ಒಪ್ಪಿಕೊಳ್ಳುವಂತೆ ಪೊಲೀಸರಿಂದ ಚಿತ್ರಹಿಂಸೆ; ಮಹಿಳೆಯ ನೋವಿನ ಮಾತುಗಳ ವೀಡಿಯೋ ವೈರಲ್

ಚಿತ್ತೂರು: ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಮನೆ ಕೆಲಸದಾಕೆಯನ್ನು ಠಾಣೆಗೆ ಕರೆದೊಯ್ದು ಚಿತ್ರ ಹಿಂಸೆನೀಡಲಾಗಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಚಿತ್ತೂರ್-1 ನಗರ ಠಾಣಾ ವ್ಯಾಪ್ತಿಯ ಲಕ್ಷ್ಮೀ ನಗರ ನಿವಾಸಿ ಉಮಾ ಮಹೇಶ್ವರಿ ಎಂಬ ದಲಿತೆ ಮಹಿಳೆ, ಚಿತ್ತೂರು ಜಿಲ್ಲಾ ಜೈಲು ಮೇಲ್ವಿಚಾರಕ ವೇಣುಗೋಪಾಲ ರೆಡ್ಡಿಯವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲ ದಿನಗಳ ಹಿಂದೆ ತನ್ನ ಮನೆಯಲ್ಲಿ 2 ಲಕ್ಷ ರೂಪಾಯಿ ಕಳ್ಳತನವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ವೇಣುಗೋಪಾಲ ರೆಡ್ಡಿ, ಉಮಾ ಮಹೇಶ್ವರಿ ವಿರುದ್ಧ ಆರೋಪ ಹೊರಿಸಿದ್ದರು.

ಈ ಹಿನ್ನೆಲೆಯಲ್ಲಿ ಚಿತ್ತೂರು-1 ನಗರ ಪೊಲೀಸ್ ಠಾಣೆಯಲ್ಲಿ ಮಹೇಶ್ವರಿ ಅವರನ್ನು ವಿಚಾರಣೆ ನಡೆಸಲಾಗಿತ್ತು. ಆದರೆ ತನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದ್ದು, ಕಳ್ಳತನ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುವಂತೆ ತನ್ನ ಹಾಗೂ ಪತಿಯ ಮೇಲೆ ಹಲ್ಲೆ ಮಾಡುವುದರ ಜೊತೆಗೆ ಠಾಣೆಯಲ್ಲಿ ಚಿತ್ರಹಿಂಸೆ ನೀಡಲಾಗಿದೆ ಎಂದು ಉಮಾ ಮಹೇಶ್ವರಿ ಕಣ್ಣೀರಿಟ್ಟಿದ್ದಾರೆ. ಈ ವೀಡಿಯೋ ಇದೀಗ ವೈರಲ್ ಆಗಿದ್ದು, ತೆಲುಗು ದೇಶಂ ಪಾರ್ಟಿ – ಟಿಡಿಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿದೆ.

ಆದರೆ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಚಿತ್ತೂರು ಪೊಲೀಸ್ ಉಪವರಿಷ್ಠಾಧಿಕಾರಿ ಪೊಲೀಸರ ವಿರುದ್ಧ ಮಾಡಲಾಗಿರುವ ಆರೋಪಗಳು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.

Join Whatsapp
Exit mobile version