Home ಕರಾವಳಿ ಉಳ್ಳಾಲ | ಚೂರಿಯಿಂದ ಇರಿದು ಮಹಿಳೆಯ ಬರ್ಬರ ಹತ್ಯೆ: ಮೃತದೇಹ ಶೌಚಾಲಯದಲ್ಲಿ ಎಸೆದು ಪರಾರಿಯಾದ ಯುವಕ

ಉಳ್ಳಾಲ | ಚೂರಿಯಿಂದ ಇರಿದು ಮಹಿಳೆಯ ಬರ್ಬರ ಹತ್ಯೆ: ಮೃತದೇಹ ಶೌಚಾಲಯದಲ್ಲಿ ಎಸೆದು ಪರಾರಿಯಾದ ಯುವಕ

ಉಳ್ಳಾಲ: ಚೂರಿಯಿಂದ ಇರಿದು ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿ ಶೌಚಾಲಯದಲ್ಲಿ ಶವ ಎಸೆದು ವ್ಯಕ್ತಿ ಪರಾಗಿಯಾಗಿರುವ ಘಟನೆ ಉಳ್ಳಾಲ ಕೋಟೆಪುರದಲ್ಲಿ ನಡೆದಿದೆ.


35-40ರ ಹರೆಯದ ಮಹಿಳೆ ಹತ್ಯೆಯಾದವರು. ಆಕೆಯೊಂದಿಗೆ ಇದ್ದ ನಯೀಮ್ (30) ಎಂಬಾತ ಪರಾರಿಯಾಗಿದ್ದಾರೆ. ಆತನೇ ಮಹಿಳೆಯನ್ನು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಈ ಜೋಡಿ ಕೋಟೆಪುರದ ಹಮೀದ್ ಎಂಬವರ ಬಾಡಿಗೆ ಮನೆಯಲ್ಲಿತ್ತು ಎಂದು ತಿಳಿದುಬಂದಿದೆ.


ಹಮೀದ್ ಅವರಿಗೆ ಹಲವು ಬಾಡಿಗೆ ಮನೆಗಳಿವೆ. ಈ ಪೈಕಿ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ಒಂದು ಮನೆಯನ್ನು ಬಾಡಿಗೆಗೆ ಪಡೆದು ಸೆಲೂನ್ ನಡೆಸುತ್ತಿದ್ದರು. ಹಮೀದ್ ಅವರು ಸೆಲೂನ್ ನಡೆಸುವ ವ್ಯಕ್ತಿಗೆ ಉಳಿದ ಬಾಡಿಗೆ ಮನೆಗಳ ಕೀಯನ್ನು ಕೊಟ್ಟು, ಯಾರಾದರೂ ಬಾಡಿಗೆಗೆ ಮನೆ ಕೇಳಿ ಬಂದರೆ ಅಡ್ವಾನ್ಸ್ ತೆಗೆದು ಮನೆ ಬಾಡಿಗೆಗೆ ಕೊಡು ಎಂದು ಸೂಚಿಸಿದ್ದರು.
ಎರಡು ದಿನಗಳ ಹಿಂದೆ ಈ ಜೋಡಿ ಮನೆ ಹುಡುಕುತ್ತಾ ಕೋಟೆಪುರದ ಸೆಲೂನ್ ಬಳಿ ಬಂದಿದೆ. ಸೆಲೂನ್ ನಡೆಸುವ ಉತ್ತರ ಪ್ರದೇಶ ಮೂಲದ ವ್ಯಕ್ತಿ ಜೋಡಿಯ ಹಿನ್ನೆಲೆ ಪರಿಶೀಲಿಸದೆ, ಯಾವುದೇ ದಾಖಲೆ ಪತ್ರಗಳನ್ನು ಕೇಳದೆ ಕೊಠಡಿಯನ್ನು ಬಾಡಿಗೆಗೆ ಕೊಟ್ಟಿದ್ದಾನೆ.


ಮನೆಗೆ ಬರುವಾಗ ಇಬ್ಬರೂ ಮಕ್ಕಳ ಬಟ್ಟೆ ವ್ಯಾಪಾರ ನಡೆಸುವವರು ಎಂದು ತಿಳಿಸಿದ್ದು, ಇನ್ನೇನು ಬಟ್ಟೆಗಳ ಲೋಡ್ ಬರಬೇಕಿದೆ ಎಂದು ತಿಳಿಸಿ ಮನೆಯಲ್ಲಿದ್ದರು. ಇಬ್ಬರೂ ಮನೆಯಿಂದ ಹೊರಬಾರದೇ ಇರುವುದನ್ನು ಗಮನಿಸಿದ ಸ್ಥಳೀಯರೊಬ್ಬರು ಮನೆ ಬಾಗಿಲು ತೆಗೆಯಲು ಮುಂದಾದಾಗ ಚಿಲಕ ಹಾಕದೇ ಇದ್ದು, ಒಳಪ್ರವೇಶಿಸಿದಾಗ ಚಾಪೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿವೆ. ಒಳಗಡೆ ಹೋಗಿ ಪರಿಶೀಲಿಸಿದಾಗ ಮಹಿಳೆಯ ಮೃತದೇಹ ಶೌಚಾಲಯದೊಳಕ್ಕೆ ಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಘಟನಾ ಸ್ಥಳದಲ್ಲಿ ಕೃತ್ಯಕ್ಕೆ ಬಳಸಲಾದ ಚೂರಿ ಕೂಡಾ ಪತ್ತೆಯಾಗಿದೆ. ಆಕೆಯ ಜೊತೆಗಿದ್ದ ಯುವಕ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಉಳ್ಳಾಲ ಪೊಲೀಸರು, ವಿಧಿ ವಿಜ್ಞಾನ ತಜ್ಞರ ತಂಡ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version