ಮಂಗಳೂರು: ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿನಗರ ಎಂಬಲ್ಲಿ ನಸುಕಿನ ಜಾವ ಕಂಪೌಂಡ್ ಗೋಡೆ ಮನೆ ಮೇಲೆ ಉರುಳಿ ಬಿದ್ದು ಮನೆಯೊಳಗೆ ವಾಸ್ತವ್ಯವಿದ್ದ ಒಂದೇ ಕುಟುಂಬದ ಯಾಸಿರ್(45),ಅವರ ಪತ್ನಿ ಮರಿಯಮ್ಮ(40) ಮಕ್ಕಳಾದ ರಿಹಾನ (11)ಮತ್ತು ರಿಫಾನ (17) ಮೃತಪಟ್ಟಿರುವ ಘಟನೆ ಆಘಾತಕಾರಿಯಾಗಿದೆ. ಜಿಲ್ಲಾಡಳಿತವು ಕೂಡಲೇ ಮೃತ ಕುಟುಂಬಕ್ಕೆ ಪರಿಹಾರ ಧನವನ್ನು ಮಂಜೂರು ಮಾಡಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನವಾಗಬೇಕಾಗಿ ರಿಯಾಝ್ ಫರಂಗಿಪೇಟೆ ಆಗ್ರಹಿಸಿದ್ದಾರೆ.
ಜಿಲ್ಲಾಡಳಿತವು ಮುಂಗಾರು ಮಳೆಯ ಮುಂಜಾಗ್ರತಾ ಕ್ರಮದ ಭಾಗವಾಗಿ ಅಪಾಯದ ಸ್ಥಿತಿಯಲ್ಲಿರುವ ಮನೆಗಳನ್ನು ಒಕ್ಕಲೆಬ್ಬಿಸಿ ಅವರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದು ಅವರ ಜವಾಬ್ದಾರಿಯಾಗಿರುತ್ತದೆ. ಎರಡು ವರ್ಷಗಳ ಹಿಂದೆಯೂ ಇದೇ ಮನೆಯ ಮೇಲೆ ಕಂಪೌಂಡು ಕುಸಿದು ಬಿದ್ದು ಯಾವುದೇ ಪ್ರಾಣಪಾಯಗಳಾಗಿರಲಿಲ್ಲ ಆದರೆ ಈಗ ಅದೇ ಮನೆಯ ಮೇಲೆ ಮತ್ತೆ ಕಂಪೌಂಡು ಕುಸಿದು 4 ಮರಣ ಸಂಭವಿಸಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ. ಇದೇ ರೀತಿ ನಾಟೆಕಲ್ ಪರಿಸರದಲ್ಲೂ ಕಂಪೌಂಡ್ ಕುಸಿದು ಬಿದ್ದು ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ ಇಂತಹ ಹಲವಾರು ಘಟನೆಗಳು ಸಂಭವಿಸುತ್ತಿದ್ದು ಜಿಲ್ಲಾಡಳಿತ ಮತ್ತು ಕರ್ನಾಟಕ ಸರ್ಕಾರವು ಪ್ರಕೃತಿ ವಿಕೋಪ ನಿರ್ವಹಣೆ ಸರಿಯಾಗಿ ನಿರ್ವಹಿಸದ ಕಾರಣ ಈ ರೀತಿಯ ಘಟನೆಗಳು ಸಂಭವಿಸುತ್ತಿದೆ.
ಇದೇ ರೀತಿ ಉಳ್ಳಾಲದ ಹಳೆ ಕೋಟೆಯಲ್ಲಿ ಬೃಹತ್ ಗಾತ್ರದ ಕಂಪೌಂಡ್ ಹಲವು ವರ್ಷಗಳಿಂದ ಅಪಾಯಕಾರಿ ಸ್ಥಿತಿಯಲ್ಲಿದ್ದರು ಸ್ಥಳೀಯ ಶಾಸಕರು ಭೇಟಿ ನೀಡಿದ್ದರೂ ಯಾವುದೇ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರಿರುವ ಘಟನೆಯು ಉಳ್ಳಾಲ ಕ್ಷೇತ್ರದಲ್ಲಿ ಇದೆ. ಪ್ರಕೃತಿ ವಿಕೋಪದಲ್ಲಿ ಜೀವ ಕಳೆದು ಹೋದ ನಂತರ ಸಾಂತ್ವನ, ಸಂತಾಪ ಸೂಚಿಸುವ ಬದಲು ಮುಂಜಾಗೃತ ಕ್ರಮದ ಭಾಗವಾಗಿ ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ಈ ಬಗ್ಗೆ ಎಚ್ಚೆತ್ತುಕ್ಕೊಳ್ಳಬೇಕಾಗಿ ಮೂಲಕ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ರವರು ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.