ಮಂಗಳೂರು: ಈಜಿಪ್ಟ್ ಗೆ ತೆರಳುತ್ತಿದ್ದ ಹಡಗೊಂದು ಉಳ್ಳಾಲದಿಂದ 5.2 ನಾಟಿಕಲ್ ಮೈಲಿ ದೂರದಲ್ಲಿ ಸಮುದ್ರದಲ್ಲಿ ಮುಳುಗುವ ಅಪಾಯಕ್ಕೆ ಸಿಲುಕಿದಾಗ ಕೋಸ್ಟ್ ಗಾರ್ಡ್ ಸಿಬ್ಬಂದಿ ಮಂಗಳವಾರ ಕಾರ್ಯಾಚರಣೆ ನಡೆಸಿ ಹಡಗಿನಲ್ಲಿದ್ದ 15 ಮಂದಿ ಸಿರಿಯನ್ ಪ್ರಜೆಗಳನ್ನು ರಕ್ಷಿಸಿದ್ದಾರೆ.
ಎಂ.ವಿ.ಪ್ರಿನ್ಸೆಸ್ ಎಂಬ ಹೆಸರಿನ ಹಡಗು ಉಳ್ಳಾಲ ಸಮೀಪದಲ್ಲಿ ಅಪಾಯಕ್ಕೆ ಸಿಲುಕಿರುವ ಮಾಹಿತಿ ಬಂದಿದೆ, ತಕ್ಷಣ ಕೋಸ್ಟ್ ಗಾರ್ಡ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ತೆರಳಿದ್ದಾರೆ.
ನಾವೆಯ ಒಳಭಾಗದಲ್ಲಿ ಸಣ್ಣ ರಂಧ್ರದ ಮೂಲಕ ನೀರು ಬರಲು ಪ್ರಾರಂಭಿಸಿದ್ದು, ಅದನ್ನು ಅಂಡರ್ ವಾಟರ್ ನಲ್ಲಿ ತುರ್ತು ದುರಸ್ತಿ ಮಾಡುವಂತೆ ಕೋಸ್ಟ್ ಗಾರ್ಡ್ ಗೆ ಮನವಿ ಬಂದಿತ್ತು. ಸ್ಥಳಕ್ಕೆ ತೆರಳಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಹಡಗಿನಲ್ಲಿದ್ದ ಎಲ್ಲಾ 15 ಮಂದಿಯನ್ನು ರಕ್ಷಿಸಲಾಗಿದೆ.