ನವದೆಹಲಿ: ಇಂಗ್ಲೆಂಡ್ ಪ್ರಧಾನಿ ಹುದ್ದೆಗೆ ಬೋರಿಸ್ ಜಾನ್ಸನ್ ಜುಲೈ 7 ರಂದು ರಾಜೀನಾಮೆ ಘೋಷಿಸಿದ್ದಾರೆ. ಇದೀಗ ಯುಕೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಯುಕೆ ಮಾಜಿ ಚಾನ್ಸೆಲರ್ ರಿಷಿ ಸುನಕ್ ಸ್ಪರ್ಧಿಸುತ್ತಿದ್ದು, ರಿಷಿ ಅವರು ಮೊದಲ ಸುತ್ತಿನ ಮತದಾನದಲ್ಲಿ ಹೆಚ್ಚು ಮತ ಗಳಿಸಿ ಮುಂಚೂಣಿಯಲ್ಲಿದ್ದಾರೆ.
ರಿಷಿ ಸುನಕ್ 88 ಮತಗಳನ್ನು ಗಳಿಸಿದ್ದು, ಪೆನ್ನಿ ಮೊರ್ಡಾಂಟ್, 67 ಮತಗಳು ಮತ್ತು ಟ್ರಸ್ ಲಿಜ್ 50 ಮತಗಳು ಗಳಿಸಿದ್ದಾರೆ. ಹೀಗಾಗಿ ಪೆನ್ನಿ ಮೊರ್ಡಾಂಟ್ ಮತ್ತು ಟ್ರಸ್ ಲಿಜ್ರನ್ನು ಮೀರಿಸಿ ರಿಷಿ ಸುನಾಕ್ ಮುಂದಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಹಣಕಾಸು ಸಚಿವ ನಧಿಮ್ ಜಹಾವಿ ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಜೆರೆಮಿ ಹಂಟ್ ಎಲಿಮಿನೆಟ್ ಆಗಿದ್ದಾರೆ. ಹಾಗೂ ಇನ್ನೊಬ್ಬ ಭಾರತೀಯ ಮೂಲದ ಸಂಸತ್ತಿನ ಸದಸ್ಯರಾದ ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ಮನ್ ಕೂಡ ಈ ರೇಸ್‌ನಲ್ಲಿದ್ದಾರೆ.
ಚುನಾವಣಾ ವೇಳಾಪಟ್ಟಿಯಡಿಯಲ್ಲಿ, ಕನ್ಸರ್ವೇಟಿವ್ ನಾಯಕನಾಗಿ ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯನ್ನು ಸೆಪ್ಟೆಂಬರ್ 5 ರಂದು ಘೋಷಿಸಲಾಗುವುದು ಎಂದು ತಿಳಿದು ಬಂದಿದೆ.