Home ಕರಾವಳಿ ಉಡುಪಿ: ಹಿಜಾಬ್ ಪ್ರಕರಣದಲ್ಲಿ ಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯ ತಂದೆಯ ಹೋಟೆಲ್ ಮೇಲೆ ದಾಳಿ, ಸಹೋದರನಿಗೆ ಹಲ್ಲೆ

ಉಡುಪಿ: ಹಿಜಾಬ್ ಪ್ರಕರಣದಲ್ಲಿ ಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯ ತಂದೆಯ ಹೋಟೆಲ್ ಮೇಲೆ ದಾಳಿ, ಸಹೋದರನಿಗೆ ಹಲ್ಲೆ

ಮಲ್ಪೆ: ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿನಿಯೊಬ್ಬಳ ತಂದೆಯ ಹೋಟೆಲಿಗೆ ದಾಳಿ ನಡೆಸಿ, ಸಹೋದರನಿಗೆ ಹಲ್ಲೆಗೈದಿರುವ ಘಟನೆ ಸೋಮವಾರ ರಾತ್ರಿ ಮಲ್ಪೆ ಪೇಟೆಯಲ್ಲಿ ನಡೆದಿದೆ.

ವಿದ್ಯಾರ್ಥಿನಿಯ ತಂದೆ ಹೈದರ್ ಅಲಿ ಎಂಬವರ ಬಿಸ್ಮಿಲ್ಲಾ ಹೊಟೆಲ್ ಮೇಲೆ ದುಷ್ಕರ್ಮಿಗಳ ತಂಡ ಕಲ್ಲು ತೂರಾಟ ನಡೆಸಿ, ಸಹೋದರ ಸೈಪ್(20) ಗೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.  

ಹಲ್ಲೆಗೊಳಗಾಗಿ ಗಾಯಗೊಂಡಿರುವ ಸೈಫ್ ನನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ದೌಡಾಯಿಸಿದ ಮಲ್ಪೆ ಪೊಲೀಸರು ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿದ್ಯಾರ್ಥಿನಿ ಹಾಝರಾ ಶಿಫಾ, “ನನ್ನ ಸಹೋದರನ ಮೇಲೆ ಗುಂಪೊಂದು ಕ್ರೂರವಾಗಿ ಹಲ್ಲೆ ನಡೆಸಿದೆ. ನಾನು ನನ್ನ ಹಿಜಾಬ್ ಪರವಾಗಿ ನಿಲ್ಲುವುದನ್ನು ಮುಂದುವರಿಸುತ್ತೇನೆ. ಅದು ನನ್ನ ಹಕ್ಕು. ನಮ್ಮ ಆಸ್ತಿಯನ್ನೂ ಹಾಳು ಮಾಡಿದ್ದಾರೆ. ಏಕೆ?? ನಾನು ನನ್ನ ಹಕ್ಕನ್ನು ಕೇಳುವುದು ತಪ್ಪೇ? ಇನ್ನು ಮುಂದಿನ ಬಲಿಪಶು ಯಾರಾಗಿರಬಹುದು? ಪೊಲೀಸರೇ ಸಂಘ ಪರಿವಾರದ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳಿ” ಎಂದು ಒತ್ತಾಯಿಸಿದ್ದಾರೆ.  

Join Whatsapp
Exit mobile version