ಉಡುಪಿ: ಸುಮಾರು 13 ವರ್ಷಗಳಿಂದ ದೂರವಾಗಿದ್ದ ದಂಪತಿ ನ್ಯಾಯಾಧೀಶರ ಸಲಹೆ ಮೇರೆಗೆ ಮಗಳಿಗಾಗಿ ಒಂದಾಗಿರುವ ಘಟನೆ ಉಡುಪಿಯ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ.
ಮಂಗಳೂರಿನಲ್ಲಿ ವಿವಾಹವಾಗಿ ಬ್ರಹ್ಮಾವರದಲ್ಲಿ ನೆಲೆಸಿದ್ದ ದಂಪತಿಗೆ 18 ವರ್ಷದ ಮಗಳಿದ್ದಾಳೆ. ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದರಿಂದ ಎರಡು ವರ್ಷಕ್ಕೊಮ್ಮೆ ಬಂದು ಹೋಗುತ್ತಿದ್ದರು. ಈ ಕಾರಣದಿಂದ ಗಂಡ ತನ್ನನ್ನು ಮತ್ತು ಮಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅಸಮಾಧಾನಗೊಂಡ ಪತ್ನಿ 13 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಬಗ್ಗೆ ಕುಟುಂಬದ ಹಿರಿಯರು ಹಲವು ಬಾರಿ ರಾಜಿ ಸಂಧಾನ ನಡೆಸಿದ್ದರೂ ಪ್ರಯತ್ನಗಳೆಲ್ಲಾ ಫಲಶೂನ್ಯವಾಗಿತ್ತು.
ಇತ್ತೀಚೆಗೆ ಪತಿ ವಿದೇಶದಿಂದ ಊರಿಗೆ ಬಂದಾಗ ಪತ್ನಿ, ತನಗೂ ಮತ್ತು ಮಗಳಿಗೂ ಪತಿಯಿಂದ ಜೀವನಾಂಶ ಕೊಡಿಸುವಂತೆ ಕೋರ್ಟ್ ಮೊರೆ ಹೋಗಿದ್ದರು. ಕೌಟುಂಬಿಕ ನ್ಯಾಯಾಲಯ ಈ ಪ್ರಕರಣವನ್ನು ರಾಜಿ ಸಂಧಾನ ಕೇಂದ್ರಕ್ಕೆ ಕಳುಹಿಸಿತ್ತು.
ನ್ಯಾಯಾಧೀಶರು, ಮಧ್ಯಸ್ಥಿಕೆದಾರರು ಹಾಗೂ ವಕೀಲರು ದಂಪತಿಯನ್ನು ಕರೆಸಿ ಮಾತನಾಡಿ ಮಗಳ ಭವಿಷ್ಯದ ಬಗ್ಗೆ ತಿಳಿ ಹೇಳಿದ್ದರಿಂದ ಅಂತಿಮವಾಗಿ ತಮ್ಮ ಮಗಳಿಗಾಗಿ ಒಟ್ಟಿಗೆ ಜೀವನ ನಡೆಸಲು ದಂಪತಿ ಒಪ್ಪಿಕೊಂಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.