ಉಡುಪಿ: ಜಿಲ್ಲೆಯಲ್ಲೂ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದ್ದು, ಮಳೆಯ ಅವಾಂತರಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಸೊಸೈಟಿ ಗುಡ್ಡೆ ಎಂಬಲ್ಲಿ ಮಹಿಳೆಯೊಬ್ಬರು ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಉಸುರುಗಟ್ಟಿ ಸಾವನ್ನಪ್ಪಿದ್ದಾರೆ.
ಹಳ್ಳಿ ಬೇರು ನಿವಾಸಿ ಅಂಬಾ (45) ಮೃತರು. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳೀಯರ ಸಹಾಯದಿಂದ ಮಹಿಳೆಯ ಮೃತದೇಹವನ್ನು ಹೊರ ತೆಗೆಯಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ವ್ಯಾಪ್ತಿಗೆ ಬರುವ ಅಮಾವಾಸೆಬೈಲಿನ ರಟ್ಟಾಡಿ ಗ್ರಾಮ ನಿನ್ನೆ ಸಂಭವಿಸಿದ ಭಾರೀ ಗಾಳಿ ಮಳೆಗೆ ತತ್ತರಿಸಿ ಹೋಗಿದೆ. ನೂರಾರು ವರ್ಷಗಳಿಂದ ಬೆಳೆದು ನಿಂತ ಮರಗಳು, ಕೃಷಿಗಾಗಿ ಬೆಳೆಸಿದ ಅಡಿಕೆ ಮರಗಳು, ವಾಣಿಜ್ಯ ಬೆಳೆಗಳು, ತೆಂಗು ಹಲಸು ಮಾವು ಗೇರು ಮರಗಳು ನೆಲಸಮವಾಗಿದೆ.
ಬಿರುಗಾಳಿಗೆ ಕುಂದಾಪುರ ತಾಲೂಕಿನ ಅಮಾಸೆಬೈಲಿನ ರಟ್ಟಾಡಿ ಗ್ರಾಮದ ಬಾಲಕೃಷ್ಣ ನಡಬೂರು ಇವರ 50 ಅಡಿಕೆ ಮರ ಹಾನಿಗೊಂಡಿದ್ದರೆ, ರಾಜೀವ ನಡಬೂರು ಇವರ 100ಕ್ಕೂ ಅಧಿಕ ಅಡಿಕೆ ಮರ ತುಂಡಾಗಿ ನೆಲಕ್ಕುರುಳಿದೆ. ಯಲ್ಲ ನಡಬೂರು ಇವರ 50 ಅಡಿಕೆ ಮರ, ಅಮಾಸೆಬೈಲು ಗ್ರಾಮದ ಕುರುಬಲಮಕ್ಕಿಯ ದ್ಯಾವ ಪೂಜಾರಿ ಇವರ 70 ಅಡಿಕೆ ಮರ ಹಾಗೂ ಎರಡು ತೆಂಗಿನನ ಮರ ತುಂಡಾಗಿ ನೆಲಕ್ಕೆ ಉರುಳಿದೆ.
ಅಮಾಸೆಬೈಲು ಜಡ್ಕಿನಗದ್ದೆ ಬಸವ ಪೂಜಾರಿ ಇವರ 60 ಅಡಿಕೆ ಮರ, ಎರಡು ತೆಂಗಿನ ಮರಗಳು ಹಾಗೂ ಅಮಾಸೆ ಬೈಲು ಹೆದ್ದಾರಿಗದ್ದೆಯ ತೇಜ ಕುಲಾಲರ 40ಕ್ಕೂ ಅಧಿಕ ಅಡಿಕೆ ಮರಗಳಿಗೆ ಸಂಪೂರ್ಣ ಹಾನಿಯಾಗಿದೆ. ರಟ್ಟಾಡಿ ಗ್ರಾಮದ ಮಹಾಬಲ ಕಾನ್ಬೈಲು ಇವರ ಮನೆಯ ಮಾಡಿನ ತಗಡು ಹಾಗೂ ಸಿಮೆಂಟ್ ಶೀಟುಗಳು ಹಾರಿಹೋಗಿವೆ.