Home ಟಾಪ್ ಸುದ್ದಿಗಳು ಶಿಂಧೆಯನ್ನು ಶಿವಸೇನೆಯಿಂದ ಹೊರದಬ್ಬಿದ ಉದ್ಧವ್ ಠಾಕ್ರೆ

ಶಿಂಧೆಯನ್ನು ಶಿವಸೇನೆಯಿಂದ ಹೊರದಬ್ಬಿದ ಉದ್ಧವ್ ಠಾಕ್ರೆ

ಮುಂಬೈ: ಪಕ್ಷ ವಿರೋಧಿ ಆರೋಪದ ಮೇಲೆ ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರನ್ನು ನಾಯಕ ಸ್ಥಾನದಿಂದ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶುಕ್ರವಾರ ತಡರಾತ್ರಿ ಪಕ್ಷದಿಂದ ಉಚ್ಛಾಟನೆ  ಮಾಡಿದೆ.

ಠಾಕ್ರೆ ಅವರು ಶಿಂಧೆಗೆ ನೀಡಿರುವ ನೋಟೀಸ್ ನಲ್ಲಿ, ನೀವು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದೀರಿ ಮತ್ತು ಸ್ವಯಂಪ್ರೇರಣೆಯಿಂದ ಶಿವಸೇನೆಯ ಸದಸ್ಯತ್ವವನ್ನು ತ್ಯಜಿಸಿದ್ದೀರಿ. ಆದ್ದರಿಂದ, ಶಿವಸೇನಾ ಪಕ್ಷದ ಪ್ರಮುಖನಾಗಿ ನನಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ, ನಾನು ನಿಮ್ಮನ್ನು ಶಿವಸೇನೆ ಪಕ್ಷದ ನಾಯಕನ ಸ್ಥಾನದಿಂದ ತೆಗೆದುಹಾಕುತ್ತಿದ್ದೇನೆ ಎಂದು ತಿಳಿಸಿದ್ದಾರೆ.

39 ಶಾಸಕರ ಜೊತೆ ಏಕನಾಥ ಶಿಂಧೆ ಬಂಡಾಯವೆದ್ದ ಕಾರಣ ಉದ್ಡವ್ ಠಾಕ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಆ ಬಳಿಕ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಈ ಮಧ್ಯೆ, ಮುಖ್ಯಮಂತ್ರಿ ಏಕನಾಥ ಶಿಂಧೆಯ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಸರ್ಕಾರವು ಇದೇ 4ರಂದು (ಸೋಮವಾರ) ವಿಶ್ವಾಸಮತ ಕೋರಲಿದೆ. ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಅವರು ವಿಧಾನಸಭೆಯ ಸ್ಪೀಕರ್ ಹುದ್ದೆಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣೆ ನಡೆಸಬೇಕಾದ ಅಗತ್ಯ ಬಿದ್ದರೆ ಭಾನುವಾರ ಚುನಾವಣೆ ನಡೆಯಲಿದೆ. ಎರಡು ದಿನಗಳ ವಿಶೇಷ ಅಧಿವೇಶನ ಭಾನುವಾರವೇ ಆರಂಭವಾಗಲಿದೆ.

ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಉದ್ಧವ್ ನೇತೃತ್ವದ ಶಿವಸೇನಾ, ಎನ್ಸಿಪಿ, ಕಾಂಗ್ರೆಸ್ ಮೈತ್ರಿಕೂಟವಾದ ಮಹಾ ವಿಕಾಸ ಆಘಾಡಿ (ಎಂವಿಎ) ನಿರ್ಧರಿಸಿದೆ. ಆದರೆ, ಅಭ್ಯರ್ಥಿ ಯಾರು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ.

Join Whatsapp
Exit mobile version