ಗುವಾಹಟಿ: ಮುಸ್ಲಿಮ್ ಪತ್ರಕರ್ತನಿಗೆ ಕಬ್ಬಿಣದ ರಾಡ್’ನಿಂದ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಉಬರ್ ಚಾಲಕ ಪ್ರಕಾಶ್ ಗೊಗೊಯ್ ಎಂಬಾತನನ್ನು ಅಸ್ಸಾಮ್ ಗುವಾಹಟಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹಣ ಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಮುಹಮ್ಮದ್ ಅಬುಝಾರ್ ಚೌಧರಿ ಎಂಬ ಪತ್ರಕರ್ತರಿಗೆ ರಾಡ್’ನಿಂದ ಹಲ್ಲೆ ನಡೆಸಲಾಗಿದೆ.
ಅಬುಝಾರ್ ಮತ್ತು ಜೈನ್ ಎಂಬವರು ಪತ್ರಿಕೋದ್ಯಮದ ಕೆಲಸ ಕಾರ್ಯಗಳಿಗಾಗಿ ಹೋಗುತ್ತಿರುವಾಗ ಹಲ್ಲೆ ನಡೆಸಲಾಗಿದೆ ಎಂದು ಮಾಧ್ಯಮಗಳಿಗೆ ಪೊಲೀಸರು ತಿಳಿಸಿದ್ದಾರೆ.
ಆಕ್ರೋಶಿತ ಚಾಲಕ ನಮ್ಮನ್ನು ಉದ್ದೇಶಿಸಿ ಕೋಮುವಾದಿ ಎಂದು ನಿಂದಿಸಿದ್ದಾರೆ ಮತ್ತು ನಮ್ಮನ್ನು ಹಲವಾರು ಬಾರಿ ಬಾಂಗ್ಲಾದೇಶಿ ಎಂದು ಕರೆದಿದ್ದಾರೆ. ತನ್ನ ಕಾರನ್ನು ನಮ್ಮ ಮೇಲೆ ಹರಿಸಲು ಪ್ರಯತ್ನಿಸಿದ್ದಾನೆ ಎಂದು ಅಬುಝಾರ್ ದೂರಿದ್ದಾರೆ.
ಘಟನೆಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಪತ್ರಕರ್ತೆ ನಿಕಿತಾ ಜೈನ್, ‘ನಾವು ಗುವಾಹಟಿಯಲ್ಲಿ ಕಾಮಾಖ್ಯಕ್ಕೆ ಹೋಗಲು ಉಬರ್ ಅನ್ನು ಬುಕ್ ಮಾಡಿದ್ದೆವು. ಆನ್ ಲೈನ್ ನಲ್ಲಿ ಹಣ ಪಾವತಿ ಮಾಡಿದ್ದೆವು. ಆದರೆ ಅವನಿಗೆ ನಗದು ರೂಪದಲ್ಲಿ ಪಾವತಿಸುವಂತೆ ಬಲವಂತಪಡಿಸಿದ್ದನು. ಇದನ್ನು ವಿರೋಧಿಸಿದಾಗ ಕೋಪಗೊಂಡ ಉಬರ್ ಚಾಲಕನು ನನ್ನ ಸಹೋದ್ಯೋಗಿ ಪತ್ರಕರ್ತ ಅಬುಝಾರ್ ಚೌಧರಿ ಅವರಿಗೆ ರಾಡ್’ನಿಂದ ಹೊಡೆದಿದ್ದಾನೆ. ಇದರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದಾಗ ಅಮುಝಾರ್ ಮೇಲೆ ಕಾರು ಹರಿಸಲು ಪ್ರಯತ್ನಿಸಿದ್ದಾನೆ. ಅಲ್ಲದೆ ನಮ್ಮನ್ನು ಬಾಂಗ್ಲಾದೇಶಿ ಎಂದೂ ಜರೆದಿದ್ದಾನೆ’ ಎಂದು ಅವರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ ಎಂದು ಅಸ್ಸಾಮ್ ಪೊಲೀಸರು ತಿಳಿಸಿದ್ದಾರೆ.